ಎಕ್ಸ್‌ಪೋ 2020 ದುಬೈ

EXPO 2020 DUBAI

Originally published in kn
Reactions 0
267
PAKASH DSOUZA
PAKASH DSOUZA 06 Oct, 2021 | 1 min read

ಹಿನ್ನಲೆ

ಎಕ್ಸ್‌ಪೋ 2020 ಪ್ರಪಂಚದಾದ್ಯಂತ ತುಂಬಾನೇ ಸದ್ದು ಮಾಡುತ್ತಿದೆ! ಹಾಗಾದ್ರೆ ಏನಿದು ಎಕ್ಸ್‌ಪೋ 2020 ಅಂತ ನಾವು ತಿಳಿದುಕೊಳ್ಳಬೇಕಾದ್ರೆ ಕೊಂಚ ಇತಿಹಾಸವನ್ನು ಇಣುಕಿ ನೋಡಬೇಕಾಗುತ್ತದೆ. World Expo ಎನ್ನುವುದು ವಿಶ್ವದ ಅತಿದೊಡ್ಡ ಸಾಂಸ್ಕೃತಿಕ ಕೂಟ. ಬಹುಶ್ಯ ಒಲಿಪಿಂಕ್ಸ್ ಮತ್ತು ಫುಟ್ಬಾಲ್ ಬಿಟ್ಟರೆ ಪ್ರಪಂಚದಾದ್ಯಂತ ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಮೇಳವೇ ಈ ಎಕ್ಸ್‌ಪೋ. ಎಕ್ಸ್‌ಪೋ ಒಂದು ಜಾಗತಿಕ ಮೇಳವಾಗಿದ್ದು , ಇದರ ಉದ್ದೇಶ ಮಾನವಕುಲ ಎದುರಿಸುತ್ತಿರುವ ಮೂಲಭೂತ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದಾಗಿದೆ. ಎಕ್ಸ್‌ಪೋ ನೆಡೆಯುವ ದೇಶದ ಸರ್ಕಾರಗಳು, ದೇಶಗಳನ್ನು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಒಟ್ಟುಗೂಡಿಸಿ ನಡೆಸುವ ಈ ಸಾರ್ವಜನಿಕ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಭಾಗಿಯಾಗುತ್ತಾರೆ. ಈ ಸಮ್ಮೇಳನ ಹೊಸ ಕ್ರಿಯಾತ್ಮಕತೆಯನ್ನು ರಚಿಸುವುದು ಮಾತ್ರವಲ್ಲದೆ ಆತಿಥೇಯ ನಗರವನ್ನು ಆರ್ಥಿಕವಾಗಿ ಬಲಪಡಿಸುವ ಸಾಮರ್ಥ್ಯ ಹೊಂದಿದೆ. ಪ್ರಪಂಚದ ಮೊತ್ತ ಮೊದಲ ಎಕ್ಸ್‌ಪೋ ನಡೆದದ್ದು 1851 ರಲ್ಲಿ ಲಂಡನ್ ನಗರದಲ್ಲಿ.ಪ್ರತಿ ಐದು ವರುಷಕ್ಕೆ ಒಮ್ಮೆ ನಡೆಯುವ ಈ ಮಹಾಸಮ್ಮೇಳನದ ಆತಿಥೇಯ ನಗರದ (ದೇಶದ ) ಆಯ್ಕೆ ಮತದಾನದ ಮೂಲಕ ನಡೆಯುತ್ತೆ. ಕಡೆಯ ಎಕ್ಸ್‌ಪೋ ನಡೆದದ್ದು 2015 ರಲ್ಲಿ ಇಟಲಿಯ ಮಿಲನ್ ನಗರದಲ್ಲಿ. 

ಎಕ್ಸ್‌ಪೋ 2020 ದುಬೈ

2020 ರ ಎಕ್ಸ್‌ಪೋ ಯುಎಇ ದೇಶದ ದುಬೈ ನಗರದಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್ 19 ಪಿಡುಗು ಎಲ್ಲರ ಲೆಕ್ಕಾಚಾರಗಳನ್ನು ತೆಲೆಕೆಳಗೆ ಮಾಡಿಬಿಟ್ಟಿತು. 2020 ರ ಎಕ್ಸ್‌ಪೋ ಗೆ ಆತಿಥೇಯ ನಗರದ ಪಟ್ಟ ಪಡೆಯುವ ಮೊದಲು ದುಬೈ ಮತದಾನದಲ್ಲಿ ಟರ್ಕಿ , ರಷ್ಯಾ , ಥೈಲ್ಯಾಂಡ್ ಮತ್ತು ಬ್ರೆಜಿಲ್ ಅನ್ನು ಸೋಲಿಸಿತ್ತು.

ಕ್ಸ್‌ಪೋ 2020 ರ ಮೂಲ ಮೂಲ ಥೀಮ್ (ವಿಷಯ) "ಪರಸ್ಪರ ಮನಸುಗಳನ್ನು ಸಂಪರ್ಕಿಸಿ ಉತ್ತಮ ಭವಿಷ್ಯವನ್ನು ರೂಪಿಸುವುದು  ಹಾಗು ಜಾಗತಿಕವಾಗಿ ಸಮರ್ಥನೀಯತೆ, ಚಲನಶೀಲತೆ ಮತ್ತು ಹೊಸ ಅವಕಾಶ ಸ್ರಷ್ಟಿ.


ದುಬೈ ಒಂದು ಪ್ರವಾಸಿ ರಾಷ್ಟ್ರ . ಇದು ಪ್ರವಾಸಿಗರ ಮತ್ತು ಖರೀದಿಸುವವರ ಸ್ವರ್ಗ. ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅವಲಂಬಿತವಾಗಿಲ್ಲದ ದುಬೈ ಸರ್ಕಾರಕ್ಕೆ ಮೂಲ ಆದಾಯ ದೊರಕುವುದು ಕೂಡ ಪ್ರವಾಸಿಗರರಿಂದ ಮತ್ತು ವಾಣಿಜ್ಯ ಚಟುವಟಿಕೆಗಳಿಂದ. ಹಾಗಾಗಿ ಪ್ರವಾಸಿಗರನ್ನು ಸೆಳೆಯಲು ಇಲ್ಲಿ ಏನಾದರೂ ಹೊಸತನ್ನು ಮಾಡುತ್ತಲೇ ಇರುತ್ತಾರೆ. ಉದಾಹರಣೆಗೆ ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜು ಖಲೀಫಾ. ಇಡೀ ಪ್ರಪಂಚ ಆರ್ಥಿಕ ಕುಸಿತದಿಂದ ಪರದಾಡುತ್ತಿದಾಗ ತನ್ನ ದೇಶ ಆರ್ಥಿಕವಾಗಿ ಕುಸಿಯದಂತೆ ಕಾಪಾಡಲು ಏನಾದರೂ ಯೋಜನೆ ನಿರ್ಮಿಸುವ ಅನಿವಾರ್ಯತೆ ಇಲ್ಲಿನ ಸರ್ಕಾರಕ್ಕಿತ್ತು. ಹಾಗಾಗಿ ಎಕ್ಸ್‌ಪೋ ಅತಿಥೇಯತೆ ದೊರೆತಾಗ ಪ್ರತಿಯೊಬ್ಬರು ಸಂಭ್ರಮ ಪಟ್ಟರು. 27 ನವೆಂಬರ್ 2013 ರಂದು, ದುಬೈ ಎಕ್ಸ್‌ಪೋ 2020 ಅನ್ನು ಆಯೋಜಿಸುವ ಹಕ್ಕನ್ನು ಗೆದ್ದಾಗ, ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಮರುದಿನ ದೇಶಾದ್ಯಂತ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಾಷ್ಟ್ರೀಯ ರಜೆ ಘೋಷಣೆ ಮಾಡಲಾಗಿತ್ತು.. ದುಬೈ ಆಡಳಿತಗಾರ 2020 ರಲ್ಲಿ ದುಬೈ "ವಿಶ್ವವನ್ನೇ ವಿಸ್ಮಯಗೊಳಿಸುತ್ತದೆ " ಎಂದು ಭರವಸೆ ನೀಡಿದರು. ವಿಶ್ವ ಮೇಳದ ವೇದಿಕೆ ಮತ್ತು ಅದಕ್ಕೆ ಕಾರಣವಾಗುವ ಸಿದ್ಧತೆಗಳು ಯುಎಇಯಲ್ಲಿ 277,000 ಹೊಸ ಉದ್ಯೋಗಗಳಿಗೆ ಕಾರಣವಾಗುತ್ತವೆ, ಆರ್ಥಿಕತೆಗೆ ಸುಮಾರು $ 40 ಬಿಲಿಯನ್ ಇಂಜೆಕ್ಷನ್, ಮತ್ತು ಕನಿಷ್ಠ 25 ಮಿಲಿಯನ್ ಮತ್ತು 100 ಮಿಲಿಯನ್ ವರೆಗಿನ ಸಂದರ್ಶಕರ ಹೆಚ್ಚಳವಾಗುತ್ತದೆ ಎಂದು ಅಂದಾಜಿಸಲಾಯಿತು. ಸಿದ್ದತೆಗಳು ಕೂಡ ಆರಂಭವಾಯಿತು ಮಾತ್ರವಲ್ಲ , ಇಲ್ಲಿನ ಪ್ರಧಾನಿ ಭರವಸೆ ಕೊಟ್ಟಂತೆ ಆ ವಿಸ್ಮಯ ಲೋಕ ಸ್ರಷ್ಟಿಯಾಗಿ ಬಿಟ್ಟಿತು.

ಎಲ್ಲವೂ ಯೋಜನೆಯಂತೆ ನಡೆದಿದ್ರೆ ಕಳೆದ ವರುಷ ಆಕ್ಟೋಬರ್ ತಿಂಗಳಿನಲ್ಲಿ ದುಬೈಯಲ್ಲಿ ಎಕ್ಸ್‌ಪೋ ಶುರುವಾಗಬೇಕಿತ್ತು ಮತ್ತು ಸುಮಾರು 25 ಮಿಲಿಯನ್ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇತ್ತು. ಆದರೆ COVID-19 ಸಾಂಕ್ರಾಮಿಕವು ಈ ಮೇಳಕ್ಕೆ ತಾತ್ಕಾಲಿಕ ತಡೆಯೊಡ್ಡಿತು. ಆದರೂ ಇಲ್ಲಿನ ಆಡಳಿತಗಾರರ ಇಚ್ಛಾಶಕ್ತಿಯ ಬಗ್ಗೆ ಎರಡು ಮಾತಿಲ್ಲ. ಜಗತ್ತೇ ನಿಬ್ಬೆರಗಾಗುವಂತೆ COVID-19 ಮಹಾಮಾರಿಯನ್ನು ಸೋಲಿಸುವ ಪಣ ತೊಟ್ಟ ಸರಕಾರ ಬಹುತೇಕ ಯಶಸ್ವಿ ಕೂಡ ಆಗಿದೆ ಎನ್ನುವುದು ವಾಸ್ತವವಾಗಿದೆ.ಕೋವಿಡ್ 19 ಲಸಿಕೆ ನೀಡಿದ ರಾಷ್ಟ್ರಗಳಲ್ಲಿ 96 % ಶೇಕಡಾದೊಂದಿಗೆ ಮೊದಲ ಸ್ಥಾನದಲ್ಲಿದೆ ಯುಎಇ. ಆನ್ಲೈನ್ ಶಿಕ್ಷಣವನ್ನು ಕೈಬಿಟ್ಟು , ಸಂಪೂರ್ಣವಾಗಿ ಶಾಲೆಯನ್ನು ಕೂಡ ಪುನರಾರಂಭಿಸಿದೆ ಈ ದೇಶ.

EXPO 2020 ಕೂಡ ಮಾರುಕಟ್ಟೆಯ ಕಾರಣಗಳಿಂದ ಹೆಸರಿನ ಬದಲಾವಣೆ ಇಲ್ಲದೆ ಮೊನ್ನೆ ಸೆಪ್ಟೆಂಬರ್ 30 ರಂದು ಜಗತ್ತೇ ನಿಬ್ಬೆರಗಾಗುವಂತೆ ಉದ್ಘಾಟನೆಗೊಂಡು ಪ್ರವಾಸಿಗರನ್ನು ತನ್ನ ವಿಸ್ಮಯಗಳಿಂದ ಸೆಳೆಯುತ್ತಿದೆ. ಆಕ್ಟೋಬರ್ 1ರಿಂದ ಶುರುವಾದ ಈ ಮಹಾಮೇಳ ಇನ್ನು 31 ಮಾರ್ಚ್ 2022 ರ ವರೆಗೆ ನಡೆಯಲಿದೆ.

ಎಕ್ಸ್‌ಪೋ 2020 ದುಬೈವಿಶೇಷತೆಗಳು

ಇದನ್ನು ನಮ್ಮ ಭಾಷೆಯಲ್ಲಿ ಸಾಂಸ್ಕೃತಿಕ , ವಾಣಿಜಾತ್ಮಕ ಮಹಾ ಜಾತ್ರೆ ಅನ್ನಬಹುದೇನೋ. ನಮ್ಮೂರಲ್ಲಿ ಜಾತ್ರೆ ಅಂದ್ರೇನೆ ಅದೆಷ್ಟು ಸಂಭ್ರಮ. ಹಾಗಿರುವಾಗ ಪ್ರಪಂಚದ ಬಹುತೇಕ ರಾಷ್ಟ್ರಗಳು ಒಂದು ಜಾಗದಲ್ಲಿ ಜೊತೆ ಸೇರಿ ನಡೆಸುವ ಜಾತ್ರೆಯ ಸಂಭ್ರಮ ಹೇಗಿರಬಹುದು ಅಲ್ವೇ . ಜೀವಮಾನದಲ್ಲಿ ಒಮ್ಮೆ ಈ ಸಂಭ್ರಮದಲ್ಲಿ ಭಾಗಿಯಾಗಬೇಕು ಅನಿಸದೇ ಇರಲು ಸಾಧ್ಯವೇ! ಹೌದು ಇಲ್ಲೊಂದು ವಿಸ್ಮಯ ಲೋಕವೇ ಸ್ರಷ್ಟಿ ಯಾಗಿಬಿಟ್ಟಿದೆ.ಎಕ್ಸ್‌ಪೋ 2020 ದುಬೈನ ಮುಖ್ಯ ತಾಣ ಸುಮಾರು 438 ಹೆಕ್ಟೇರ್ ಪ್ರದೇಶ (1083 ಎಕರೆ) ವ್ಯಾಪಿಸಿದೆ.ದುಬೈ ಯಿಂದ ಅಬುಧಾಬಿ ನಗರಕ್ಕೆ ಪ್ರಯಾಣ ಬೆಳೆಸುವಾಗ ನಡುವಿನಲ್ಲಿ ಸಿಗುತ್ತದೆ ನಮಗೆ ಈ ಮಹಾಮೇಳದ ಜಾಗ . ಈ ಮಹಾಮೇಳದಿಂದ ದೇಶದ ಜಿಡಿಪಿ ಏರಿಕೆಯಾಗುವ ನಿರೀಕ್ಷೆ ಇದೆ ಇನ್ನು ಎಕ್ಸ್‌ಪೋ 2020  ದುಬೈ ಕೆಲವು ಪ್ರಮುಖ ಆಕರ್ಷಣೆಗಳು ಹೀಗಿವೆ.ವಿಶ್ವದ ನಾನಾ ಮೂಲೆಯ ಖಾದ್ಯವನ್ನು ಇಲ್ಲಿ ನಿರ್ಮಾಣವಾಗಿರುವ 200 ಕಿಂತಲೂ ಹೆಚ್ಚಿನ ಹೋಟೆಲ್ ಗಳಲ್ಲಿ ಸವಿಯಬಹುದು. ಒಂದರ್ಥದಲ್ಲಿ ಇಡೀ ವಿಶ್ವವೇ ಚಿಕ್ಕಾದಾಗಿ ದುಬೈಗೆ ಬಂದು ಸೇರಿಕೊಂಡಂತೆ ಅಂತ ಅಂದುಕೊಂಡ್ರು ತಪ್ಪಿಲ್ಲ.ಇಲ್ಲಿ 192 ದೇಶಗಳ ಪೆವಿಲಿಯನ್ ಇದೆ. ನೀವು ಎಕ್ಸ್‌ಪೋ ಸ್ವಾಗತ ಕಚೇರಿಗೆ ಹೋದ್ರೆ ಅಲ್ಲಿ ನಿಮಗೊಂದು ವಿಶೇಷ ಪಾಸ್ಪೋರ್ಟ್ ಕೊಡುತ್ತಾರೆ. ನೀವು ಪ್ರತಿ ದೇಶದ ಪೆವಿಲಿಯನ್ ಗೆ ಭೇಟಿಕೊಟ್ಟಾಗ ಆ ದೇಶದ ಸ್ಟ್ಯಾಂಪ್ ಅನ್ನು ನಿಮ್ಮ ವಿಶೇಷವಾದ ಪಾಸ್ ಪೋರ್ಟ್ ನಲ್ಲಿ ಹಾಕುತ್ತಾರೆ. ಅಂದ್ರೆ ನೀವು ಕೇವಲ ದುಬೈಗೆ ಬೇಟಿಕೊಟ್ಟರೆ ಸಾಕು. ಇಡೀ ವಿಶ್ವಕ್ಕೆ ಹೋಗಿ ಬಂದ ಅನುಭವ ಆಗುತ್ತೆ. ಇಲ್ಲಿರುವ 150 ಕಿಂತಲೂ ಹೆಚ್ಚಿರುವ ರೋಬೊಟ್ಸ್ ಗಳು ನಿಮ್ಮನ್ನು ಸ್ವಾಗತಿಸುತ್ತವೆ, ಮಾಹಿತಿ ಕೊಡುತ್ತವೆ. ನಿಮಗೆ ಆಹಾರ ದೊರಕಿಸಿಕೊಡುವುದರಲ್ಲೂ ಸಹಾಯ ಮಾಡುತ್ತವೆ. ಲಂಡನ್ ಮೂಲದ ಒಂದು ಬೇಕರಿಯಲ್ಲಿ ನೀವು ತಿಂಡಿ ಮಾಡುವುದನ್ನು ಕಲಿತುಕೊಳ್ಳಬಹುದು. 192 ದೇಶದ ಪ್ರಜೆಗಳೊಂದಿಗೆ ನೀವು ಇಲ್ಲಿ ಓಟದ ಅಭ್ಯಾಸ ಮಾಡಬಹುದು. ದೊಡ್ಡದಾದ ಆಟದ ಮೈದಾನದಲ್ಲಿ ಮಕ್ಕಳಿಗೆ ಮತ್ತು ದೊಡ್ಡವರಿಗೆ ಮೈನವಿರೇಳಿಸುವ ಆಟಗಳ , ಮನೋರಂಜನೆಯ ವ್ಯವಸ್ಥೆ ಇದೆ. ಸಂಪೂರ್ಣ ಸೌರ ಶಕ್ತಿಯನ್ನು ಅವಲಂಬಿಸಿರುವ ಭವಿಷ್ಯದ ಮನೆಗಳನ್ನು ನೀವಿಲ್ಲಿ ನೋಡಬಹುದು.ಸೌರಶಕ್ತಿ ಚಾಲಿತ, ಕಾರ್ಬನ್-ಫೈಬರ್ ಮೇಲಾವರಣ, ಭವಿಷ್ಯದ ಪೆಟ್ರೋಲ್ ಬಂಕ್ ಗಳನ್ನೂ ನೀವಿಲ್ಲಿ ನೋಡಬಹುದು. ಯುಎಸ್ಎ (ಅಮೇರಿಕ )ಪೆವಿಲಿಯನ್ ಸ್ಪೇಸ್ ಎಕ್ಸ್ ಅನ್ನು ಪ್ರದರ್ಶಿಸುತ್ತದೆ

ಫಾಲ್ಕನ್ ರಾಕೆಟ್ ಜೊತೆಗೆ ಪ್ರದರ್ಶನಗಳು ಮತ್ತು ಚಂದ್ರ ಅಂಗಳದಿಂದ ತಂದ ಕಲ್ಲಿನ ತುಣುಕುಗಳಂತಹ ಕಲಾಕೃತಿಗಳ ಪ್ರದರ್ಶನ ಇದೆ. ಕವಿಗೋಷ್ಠಿಗಳು.ಪ್ರಪಂಚದ ಪ್ರಪ್ರಥಮ ಗಾಳಿ ರೈಲಿನ ಅನುಭವ ನೀವಿಲ್ಲಿ ಪಡೆಯಬಹುದು.14 ಮೀಟರ್ ಎತ್ತರದ ಗೋಡೆಗಳ ಒಳಗೆ ಹೆಜ್ಜೆ ಹಾಕಿ ಅದ್ಭುತವಾದ ನೀರು, ಬೆಳಕು ಮತ್ತು ಬೆಂಕಿಯ ಪ್ರದರ್ಶನವನ್ನು ನೋಡಬಹುದು.

ಇಲ್ಲಿನ ಅದ್ಬುತಗಳ ಬಗ್ಗೆ ಬರೆಯಲು ಪುಟಗಳು ಸಾಲದು. ಒಟ್ಟಿನಲ್ಲಿ ಇದೊಂದು ವಿಭಿನ್ನ . ಅದ್ಬುತ ಮತ್ತು ಅನನ್ಯವಾದ ವಿಸ್ಮಯ ಲೋಕ. ನಮ್ಮ ಹೆಮ್ಮೆಯ ಭಾರತ ಕೂಡ ಇದರಲ್ಲಿ ಭಾಗಿಯಾಗಿದೆ. ಭಾರತದ ಪೆವಿಲಿಯನ್ ಬಗ್ಗೆ ಮುಂದೆ ಬರೆಯುತೇನೆ. ಇಲ್ಲಿಗೆ ಭೇಟಿ ಸಾದ್ಯವಾಗದಿರುವವರು ಯುಟ್ಯೂಬ್ ಮೂಲಕ ಇಲ್ಲಿನ ಅದ್ಭುತಗಳನ್ನು ಪರಿಚಯಮಾಡಿಕೊಳ್ಳಬಹುದು.

 

ಪ್ರಕಾಶ್ ಮಲೆಬೆಟ್ಟು

0 likes

Published By

PAKASH DSOUZA

pakashdsouza

Comments

Appreciate the author by telling what you feel about the post 💓

Please Login or Create a free account to comment.