ಮಗಳಿಗೆ ಅಪ್ಪನ ಒಂದು ಪತ್ರ

A letter to daughter from Dad

Originally published in kn
Reactions 1
439
PAKASH DSOUZA
PAKASH DSOUZA 12 Apr, 2021 | 1 min read

ಹಾಯ್ ಮಗಳೇ ! ಒಂಬತ್ತು ವರುಷಗಳು ಹೇಗೆ ಉರುಳಿದವೋ ಗೊತ್ತೇ ಆಗಲಿಲ್ಲ ಮಗ. ಎಷ್ಟು ಬೇಗ ಎಷ್ಟು ಉದ್ದ ಬೆಳೆದುಬಿಟ್ಟಿ ನೀನು. ಮಗಳೇ ಇಷ್ಟು ದಿನ ಅನೇಕ ವಿಷಯಗಳನ್ನು ನಾನು ನಿನಗೆ ಹೇಳಿಕೊಡುತಿದ್ದೆ . ಎಷ್ಟೋ ವಿಚಾರಗಳನ್ನು ನಾವು ಚರ್ಚೆ ಮಾಡುತಿದ್ವಿ. ಅನೇಕ ವಿಷಯಗಳಲ್ಲಿ ಇವಾಗ ನೀನು ನನಗೆ ಗುರು ಆಗಿ ಬಿಟ್ಟಿದೀಯ. ನನ್ನ ಹೊಸ ಪುಸ್ತಕದ ಮುಖಪುಟವನ್ನು ಹೇಗೆ ಮಾಡಬೇಕೆಂದು ಹೇಳಿಕೊಟ್ಟಿದ್ದು ನೀನು. ಪವರ್ ಪಾಯಿಂಟ್ ಹೇಗೆ ಉಪಯೋಗಿಸೋದು ಎನ್ನುವುದರ ಬಗ್ಗೆ ನಿನ್ನ ತಿಳುವಳಿಕೆ ಅಪಾರ . ಇಷ್ಟು ಚಿಕ್ಕ ಪ್ರಾಯದಲ್ಲಿ ಅನೇಕ ವಿಷಯಗಳನ್ನು ತಿಳಿದುಕೊಂಡಿದೀಯ . ಹಾಗೆ ಬದುಕಿನ ಬಗ್ಗೆಯೂ ನೀನು ತಿಳಿದುಕೊಳ್ಳಬೇಕಾದದ್ದು , ಕಲಿಯಬೇಕಾದದ್ದು ತುಂಬಾ ಇದೆ. ನೀನು ದೇವರನ್ನು ನಂಬುತ್ತಿಯ ಅಲ್ವ. ಗೊತ್ತು ನನಗೆ ದೇವರೆಂದ್ರೆ ನಿನಗೆ ತುಂಬಾನೇ ಪ್ರೀತಿ  ಭಯ ಮತ್ತು ಭಕ್ತಿ. ಒಂದು ದಿನ ಪ್ರಾರ್ಥನೆ ಮಾಡಲು ನಾವು ಉದಾಸೀನ ಮಾಡಿದರೆ ನೀನು ಕೋಪಿಸಿಕೊಂಡದ್ದು ಕೂಡ ಇದೆ. ಒಳ್ಳೆಯದು ಮಗಳೇ. ಯಾವತ್ತೂ ಕೂಡ ನಮ್ಮ ಮೇಲೆ ಒಬ್ಬ ಸರ್ವಶಕ್ತ ಇದ್ದಾನೆ ಎನ್ನುವ ನಂಬಿಕೆ ನಮ್ಮಲಿರಬೇಕು. ಯಾಕೆಂದ್ರೆ ಕಡೆಯ ತನಕ ನಮ್ಮನ್ನು ಕಾಪಾಡೋದು ಆ ಸರ್ವಶಕ್ತ ಭಗವಂತನೇ. ನಿನ್ನೊಂದಿಗೆ ಕಡೆಯ ತನಕ ಇರೋದು ಕೂಡ ಅವನಿದ್ದಾನೆ! ಮತ್ತು ನಿನ್ನನ್ನು ಕಾಪಾಡುತ್ತಾನೆ ಎನ್ನುವ ನಂಬಿಕೆ ಮಾತ್ರ ಎನ್ನುವುದನ್ನು ನೆನಪಿಡಬೇಕು ನೀನು. ಮಿಕ್ಕಂತೆ ನಿನ್ನ ಜೀವನದಲ್ಲಿ ಬರುವ ಎಲ್ಲರೂ ಕೇವಲ ಪಾತ್ರದಾರಿಗಳು.  ಅವರೆಲ್ಲರೂ ಬದುಕಿನ ಕಡೆಯ ತನಕ ನಿನ್ನೊಂದಿಗೆ ಇರುತ್ತಾರೆ ಅಂತ ಹೇಳಲು ಬರುವುದಿಲ್ಲ. ಅದರಲ್ಲಿ ನಾನು ಬರುತೇನೆ ಹಾಗೆ ನಿನ್ನಮ್ಮ ಕೂಡ. ಹಾಗಾಗಿ ಮಗಳೇ ಬದುಕನ್ನು ಒಬ್ಬಳೇ ಎದುರಿಸಲು ನೀನಿನ್ನು ಕಲಿತುಕೊಳ್ಳಬೇಕು.ನನ್ನ ತಂದೆ ತಾಯಿ ಇದ್ದಾರೆ ನೋಡಿಕೊಳ್ಳುತ್ತಾರೆ ಎನ್ನುವ ಮನೋಭಾವದಿಂದ ಹೊರಬರಬೇಕು ನೀನು. ಮನೆಯಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಕಲಿತುಕೊಳ್ಳಲು ಆರಂಭ ಮಾಡಬೇಕು. ಓದು ಇದ್ದದ್ದೇ ಆದರೆ ಬದುಕನ್ನು ಎದುರಿಸುವಲ್ಲಿ ಓದಿನೊಂದಿಗೆ ಇತರ ವಿಷಯಗಳಿಗೆ ಕೂಡ ನೀನು ಅಷ್ಟೇ ಪ್ರಾಮುಖ್ಯತೆಯನ್ನು ಕೊಡಬೇಕು. ಪಾತ್ರೆ ತೊಳೆಯಲು, ತರಕಾರಿ ಕತ್ತರಿಸಲು, ನಿನ್ನ ಬಟ್ಟೆ ಒಗೆಯಲು , ಮನೆಯ ಕಸ ಗುಡಿಸಲು ನೀನಿನ್ನು ಕಲಿಯಲಾರಂಭಿಸಬೇಕು. ಗೊತ್ತು  ನನಗೆ ಈಗಾಗಲೇ ನೀನು ಅಮ್ಮನಿಗೆ ಸಹಾಯ ಮಾಡುತಿದ್ದೀಯಾ ಅಂತ. ಆದ್ರೂ ಅಮ್ಮ ಹೇಳುವ ಮೊದಲೇ ನೀನು ಈ ಕೆಲಸಗಳನ್ನು ಮಾಡಲು ಮುಂದಾಗಬೇಕು ಮಗಳೇ. ಇವೆಲ್ಲವನ್ನೂ ಈಗಿನಿಂದಲೇ ಕಲಿತುಕೊಂಡ್ರೆ ಮುಂದೆ ಬದುಕಿನಲ್ಲಿ ನೀನು ಯಾರನ್ನು ಅವಲಂಬಿಸುವ ಅಗತ್ಯ ಬೀಳಲ್ಲ ಕಣೋ ಪುಟ್ಟ. ಇನ್ನೊಂದು ಮುಖ್ಯ ವಿಚಾರ ಹೇಳುತೇನೆ ನಿನಗೆ. ನನಗೆ ಗೊತ್ತು ನಿನ್ನಲ್ಲಿ ನಾಯಕತ್ವದ ಗುಣ ಇದೆ. ಸಭಾ ಕಂಪನ ಇಲ್ವೇ ಇಲ್ಲ. ನಿನ್ನ ಶಾಲೆಯ ಕಾರ್ಯಕ್ರಮಗಳನ್ನು ನೀನು ನಡೆಸಿಕೊಡುವುದನ್ನು ನೋಡುವುದೇ ನಮಗೆ ಕಣ್ಣಿಗೆ ಹಬ್ಬ. ಆದ್ರೂ ಬಹಳ ಸಾರಿ ಬೇರೆಯವರ ಹತ್ತಿರ ಮಾತನಾಡಿಸಲು ಅದೇನೋ ಸಂಕೋಚ ನಿನಗೆ. ಆದರೂ ನನ್ನಷ್ಟು ಇಲ್ಲ ಬಿಡು. ನೋಡು ಮಗಳೇ, ನಿಜ ಹೇಳಲು , ಇಲ್ಲ ನಿನ್ನ ಅಭಿಪ್ರಾಯವನ್ನು ಮಂಡಿಸಲು, ಇಲ್ಲವೇ ಯಾವುದೇ ವಿಚಾರಗಳ ಬೆಗ್ಗೆ ಕೇಳಿ ತಿಳಿದುಕೊಳ್ಳಲು ಎಂದಿಗೂ ಹಿಂದೆ ಮುಂದೆ ನೋಡಬೇಡ. ಶಿಕ್ಷಕಿ ಏನು ಅಂದುಕೊಳ್ಳುತ್ತಾರೆ ನಾನು ಹೀಗೆ ಮಾತನಾಡಿದರೆ ಸರಿ ಆಗಬಹುದೋ ಇಲ್ಲವೋ ಹೀಗೆಲ್ಲ ಯೋಚನೆ ಮಾಡುತ್ತ ಕುಳಿತರೆ ನಾವು ಜೀವನದಲ್ಲಿ ಮುಂದೆ ಬರಲು ತುಂಬಾ ಕಷ್ಟ ಪಡಬೇಕಾಗುತ್ತದೆ. ಒಂದು ನೆನಪಿಡು, ನಿನ್ನ ಜೀವದಲ್ಲಿ ಬರುವ ಪ್ರತಿಯೊಬ್ಬರೂ ಕೇವಲ ತಾತ್ಕಾಲಿಕ ಸಹ ಪ್ರಯಾಣಿಕರು. ಅವರ ನಿಲ್ದಾಣ ಬಂದಾಗ ಅವರು ನಿನ್ನ ಜೀವನದಿಂದ ಮರೆಯಾಗುತ್ತಾರೆ. ಹಾಗಾಗಿ ಅವರು ಮನದಲ್ಲಿ ಏನು ಯೋಚನೆಮಾಡಬಹುದು ಎಂದು ಯೋಚಿಸುತ್ತ ಹೇಳಬೇಕಾದನ್ನು ಹೇಳದೆ ಇದ್ದಾರೆ ನಷ್ಟ ಅವರಿಗಲ್ಲ ಅದು ನಿನಗೇನೆ. ಹಾಗಾಗಿ ಯಾವತ್ತಿಗೂ ಮಾತನಾಡುವಾಗ ನೇರವಾಗಿ ದೈರ್ಯದಿಂದ ಮಾತನಾಡಿಸು. ಆತ್ಮವಿಶ್ವಾಸ ನಿನ್ನಲ್ಲಿರಲಿ. ಶಾಲೆಯಲ್ಲಿ ಸಂಶಯ ಬಂದಾಗ ಶಿಕ್ಷಕರಲ್ಲಿ ಕೇಳಲು ಯಾವುದೇ ಸಂಕೋಚ ಬೇಡ . ಯಾರಾದ್ರೂ ಸಹಾಯ ಕೇಳಿದಾಗ ಅದು ನಿನ್ನಿಂದ ಮಾಡಲು ಸಾಧ್ಯವಾದ್ರೆ ಅವರಿಗೆ ಸಹಾಯ ಮಾಡು. ಸಾಧ್ಯವಾಗೋದಿಲ್ಲವಾದ್ರೆ ಅವರಿಗೆ ನೇರವಾಗಿ ಹೇಳಿಬಿಡು ನಿನ್ನಿಂದ ಸಾಧ್ಯವಿಲ್ಲ ಅಂತ. ಅವರಿಗೆ ಬೇಸರವಾಗುತ್ತದೆ ಅಂತ ನೇರವಾಗಿ ಸಹಾಯ ಮಾಡಲು ಸಾಧ್ಯವಿಲ್ಲ ಅಂತ ಹೇಳದೆ ಸುಮ್ಮನೆ ಸುಳ್ಳು ಭರವಸೆ ಕೊಡಬೇಡ. ನೇರವಾಗಿ ಹೇಳಿದ್ರೆ ಆ ಕ್ಷಣ ಬೇಸರವಾಗಬಹುದು ಅಷ್ಟೇ. ಆದ್ರೆ ಸುಳ್ಳು ಭರವಸೆ ಕೊಟ್ಟು ನಂತ್ರ ಸಹಾಯ ಮಾಡದಿದ್ದರೆ ಅದು ಮತ್ತಷ್ಟು ಸಮಸ್ಯೆಗಳನ್ನು ಹುಟ್ಟು ಹಾಕುತ್ತೆ. ಯಾವುದೇ ವಿಚಾರ ಇರಲಿ ಮೊದಲು ಅದರ ಬಗ್ಗೆ ನೀನು ಸರಿಯಾಗಿ ಅರಿತುಕೊಳ್ಳುವ ಪ್ರಯತ್ನ ಮಾಡು.

ಗೊತ್ತಿಲ್ಲದ ವಿಚಾರವನ್ನು ಹಿರಿಯರಿಂದ ಕೇಳಿ ಅರಿತುಕೊಳ್ಳಲು ಯಾವುದೇ ಮುಜುಗರ ಬೇಡ . ಆದರೆ ನೆನಪಿಡು ಈ ಪ್ರಪಂಚದಲ್ಲಿ ನಾವು ಜೊತೆಗಿದ್ರು ಎಲ್ಲ ಸಮಯದಲ್ಲೂ ನಿನ್ನ ಜೊತೆ ಇರಲು ಸಾಧ್ಯವಿಲ್ಲ. ಮುಂದೊಮ್ಮೆ ಒಬ್ಬಂಟಿಯಾಗಿಯೇ ನೀನು ಈ ಪ್ರಪಂಚವನ್ನು ಎದುರಿಸಬೇಕಾಗಿ ಬರಬಹುದು. ಅದಕ್ಕೆ ಬೇಕಾದ ತಯಾರಿಯನ್ನು ನೀನು ಈಗಿನಿಂದಲೇ  ಆರಂಭಿಸಬೇಕು ಮಗಳೇ. ನಿನಗೆ ಸರಿ ಅನಿಸಿದ್ದು ಯಾರ ಮುಂದೆ ಕೂಡ ಹೇಳಲು ಭಯಪಡಬೇಡ. ಸಂಕೋಚ ಬೇಡವೇ ಬೇಡ. ನನ್ನ ಸಂಕೋಚ ಸ್ವಭಾವದಿಂದಾಗಿಯೇ ಜೀವನ ಅನೇಕ ಸವಿ ಗಳಿಗೆಗಳನ್ನು , ಅವಕಾಶಗಳನ್ನು ನಾನು ಕಳೆದುಕೊಂಡಿದ್ದೇನೆ. ನೀನು ಹಾಗಾಗಬಾರದು. ದೈರ್ಯವಾಗಿ ಮಾತನಾಡು. ತಪ್ಪು ಮಾಡದಿದ್ದರೆ ಯಾರಿಗೂ ಹೆದರಬೇಕಾಗಿಲ್ಲ. ಈ ಪ್ರಪಂಚದಲ್ಲಿ ನಾವು ನಮ್ಮ ಅಸ್ತಿತ್ವವನ್ನು ಗಟ್ಟಿಯಾಗಿ ಪ್ರಸ್ತುತ ಪಡಿಸಿದರೆ ಮಾತ್ರ ಉಳಿಗಾಲ ಉಂಟು ಅನ್ನೋದನ್ನ ಮರೆಯಬೇಡ ಮಗು. ಮುಂದೆ ಅನೇಕ ವಿಚಾರಗಳನ್ನು ನಿನಗೆ ತಿಳಿಸಲಿದೆ. ಇನ್ನೊಮ್ಮೆ ನಿನಗೆ ತಿಳಿಸಿಕೊಡುತೇನೆ ನನ್ನ ಮುದ್ದು ಮಗಳೇ.

ನಿನ್ನ ಪ್ರೀತಿಯ ಅಪ್ಪ.

ಪ್ರಕಾಶ್ ಮಲೆಬೆಟ್ಟು

1 likes

Published By

PAKASH DSOUZA

pakashdsouza

Comments

Appreciate the author by telling what you feel about the post 💓

  • Sindhu Shree · 2 years ago last edited 2 years ago

    It's as good as a father directly speaking to his daughter. as a daughter would love to receive such a letter from my dad.

  • PAKASH DSOUZA · 2 years ago last edited 2 years ago

    Thank you Ms. Sindhu Shree 🙏🙏

Please Login or Create a free account to comment.