ಪ್ರೀತಿಯ ಮಾರ್ಕ್ ಜುಕರ್ಬರ್ಗ್

ಪ್ರೀತಿಯ ಮಾರ್ಕ್ ಜುಕರ್ಬರ್ಗ್

Originally published in kn
Reactions 0
276
PAKASH DSOUZA
PAKASH DSOUZA 25 Mar, 2022 | 1 min read

ಪ್ರೀತಿಯ ಮಾರ್ಕ್ ಜುಕರ್ಬರ್ಗ್ 

ಮೊತ್ತ ಮೊದಲಿಗೆ ನಿನಗೆ ಹೃದಯಪೂರ್ವಕ ಅಭಿನಂದನೆಗಳು. ಇಡೀ ಪ್ರಪಂಚವನ್ನು ಬಹಳ ಹತ್ತಿರಕ್ಕೆ ತಂದ ಕೀರ್ತಿ ನಿನಗೆ ಸಲ್ಲಬೇಕು. ಚದುರಿ ಹೋದ ಸ್ನೇಹಿತರನ್ನು, ಸಂಬಂಧಿಕರನ್ನು ಮತ್ತೆ ಸನಿಹಕ್ಕೆ ಬೆಸೆದವ ನೀನು! ಜಗತ್ತಿನಾದ್ಯಂತ ಹೊಸ ಗೆಳೆತನ ಮೂಡಲು ಕಾರಣಕರ್ತ ನೀನು. ನಿನ್ನಿಂದ ಬದುಕನ್ನೇ ಬದಲಾಯಿಸಿಕೊಂಡವರು ಅದೆಷ್ಟೋ ಸಹಸ್ರ ಸಂಖ್ಯೆ ಯಲ್ಲಿದ್ದಾರೆ. ನವ ಯುಗದ ಹರಿಕಾರ ನೀನು. ಅತಿ ಕಿರಿಯ ಪ್ರಾಯದಲ್ಲಿ ಕೀರ್ತಿಯ ಶಿಖರವನ್ನು ಏರಿ ಮುಗುಳು ನಕ್ಕವನು ನೀನು. ಜಗತ್ತಿನ ಮೊದಲ ಹತ್ತು ಪ್ರಭಾವಶಾಲಿ ವ್ಯಕ್ತಿಗಳಲ್ಲಿ ನೀನು ಒಬ್ಬ. ವಯಸ್ಸು ಇನ್ನು 40 ಕೂಡ ಆಗಿಲ್ಲ ಆದರೆ ಸಾಧನೆ ಮಾತ್ರ ಅಮೋಘ ಮತ್ತು ಅದ್ಬುತ. ಅಸಾಧಾರಣವಾದ ಶ್ರೀಮಂತಿಕೆ , ಜಗತ್ತಿನಾದ್ಯಂತ ಸುತ್ತಾಟ , ಸಹಸ್ರಾರು ಜನರಿಗೆ ಅನ್ನದಾತ , ಸಮಾಜಸೇವೆಯಲ್ಲಿ ಸದಾ ಮುಂದು . ಒಟ್ಟಿನಲ್ಲಿ ಒಳ್ಳೆ ಪರಿಪೂರ್ಣ ಬದುಕು. ಭಗವಂತ ಕೊಟ್ಟ ಜನುಮವನ್ನು ತುಂಬಾನೇ ಅದ್ಭುತವಾಗಿ ನಿನಗೆ ಬೇಕಾದ ಹಾಗೆ ರೂಪಿಸಿಕೊಂಡ್ದಿದೀಯ. ಅಭಿನಂದನೆಗಳು ನಿನಗೆ ನನ್ನ ಅಭಿನಂದನೆಗಳು. ಬಹುತೇಕರ ದಿನ ಸುರು ಆಗೋದೇ ನಿನ್ನ ಫೇಸ್ ಬುಕ್ , ವಾಟ್ಸಪ್ಪ್ ಮತ್ತು ಇನ್ಸ್ಟಾಗ್ರಾಮ್ ಗಳ ಮೂಲಕ ! ಕೆಲವೇ ವರ್ಷಗಳಲ್ಲಿ ಇಡೀ ಪ್ರಪಂಚವನ್ನೇ , ಜನರ ದಿನಚರಿಯನ್ನೇ ಬದಲಾಯಿಸಿಬಿಟ್ಟೆ ನೀನು. ಪ್ರಪಂಚದಲ್ಲಿ ನಿನ್ನ ಹೆಸರನ್ನು ಕೇಳದವರು ವಿರಳ. ಆದರೆ ನಿನ್ನನ್ನು ಪ್ರೀತಿಸುವವರು ಜಗತ್ತಿನಲ್ಲಿ ಎಷ್ಟು ಜನ ಇದ್ದಾರೆ.? ಯಾವತ್ತಾದ್ರೂ ಈ ಪ್ರಶ್ನೆ ನಿನ್ನ ಮನಸಿನಲ್ಲಿ ಮೂಡಿತ್ತಾ? ಜಗತ್ತು ಸುಂದರ ಬದುಕನ್ನು ನಿನಗೆ ಕೊಟ್ಟಿದೆ. ಸುಂದರ ಬದುಕನ್ನು ಶ್ರಮಪಟ್ಟು ನೀನು ಕಟ್ಟಿಕೊಂಡಿದ್ದೀಯ.

ಒಮ್ಮೆ ಜಗತ್ತಿನ ನಾಡಿಮಿಡಿತದ ಅರಿವು ಸಿಕ್ಕಿಬಿಟ್ಟರೆ ಜಗವನ್ನುಅಳೋದು ದೊಡ್ಡ ವಿಚಾರವಲ್ಲ ಎಂದು ನೀನು ಸಾಧಿಸಿ ತೋರಿಸಿ ಬಿಟ್ಟಿದೀಯ. ಜಗತ್ತಿನ ರಾಜಕೀಯ ವ್ಯವಸ್ಥೆಗಳನ್ನೇ , ನಂಬಿಕೆಗಳನ್ನೇ ಬುಡಮೇಲು ಮಾಡುವ ಬಲಿಷ್ಠ ಸಂಸ್ಥೆಗಳು ನಿನ್ನ ಕೈಯಲಿದೆ. ಆದರೆ ಕೇಳಿಲ್ಲಿ ಮಾರ್ಕ್ ಜಗತ್ತಿನ ಒಡೆಯನಗುವುದಕ್ಕಿಂತಲೂ ಹೃದಯಕ್ಕೆ ಇಷ್ಟವಾಗುವ ವಿಚಾರ ಯಾವುದು ಗೊತ್ತೇ , ಜಗದ ಮನೆ ಮಗ ನಾಗೋದು. ಮುಂದೆ ಇಹ ಲೋಕ ತ್ಯಜಿಸಿಹೋಗುವಾಗ ಇಡೀ ಜಗತ್ತು ನಮಗಾಗಿ ಕಂಬನಿ ಮಿಡಿದರೆ ನಾವು ಬಾಳಿದ್ದು ಕೂಡ ಸಾರ್ಥಕ ಅನಿಸಿಬಿಡುತ್ತೆ. ನಿನ್ನಂತೆ ಪ್ರಸಿದ್ಧರಾದ ವ್ಯಕ್ತಿಗಳು ಹಿಂದೆ ಕೂಡ ಇದ್ರು. ಅವರ ಬಳಿ ಯಾವುದೇ ಸಾಮಾಜಿಕ ಮಾದ್ಯಮಗಳಿರಲಿಲ್ಲ. ಕಷ್ಟಗಳಿದ್ದವು . ಆದರೆ ಅವರಲ್ಲಿದ್ದ ಪ್ರೀತಿ ಇಡೀ ವಿಶ್ವ ಅವರಿಗೆ ಮಣಿಯುವಂತೆ ಮಾಡಿಬಿಟ್ಟಿತು. ಪ್ರಪಂಚದಲ್ಲಿ ಅತಿ ಹೆಚ್ಚು ಜನರಿಂದ ಪ್ರೀತಿಸಲ್ಪಡುವ ಯೇಸು ಕ್ರಿಸ್ತನ ಉದಾಹರಣೆಯನ್ನೇ ತೆಗೆದುಕೊಳ್ಳು. ಅವರ ಕಾಲದಲ್ಲಿ ಯಾವುದೇ ಸಾಮಾಜಿಕ ಮಾದ್ಯಮಗಳಿರಲಿಲ್ಲ . ವಾಹನ ಗಳಿರಲಿಲ್ಲ. ವಿಮಾನ ಅಂತೂ ದೂರದ ಮಾತು. ಆದರೆ ಅವರು ನೀಡಿ ಹೋದ ಸಂದೇಶ ಇಡೀ ವಿಶ್ವದಾದ್ಯಂತ ಹರಡಿ ಬಿಟ್ಟಿದೆ. ವಿಶ್ವ ಮಾನವ ಅವರು. ನಿನ್ನನ್ನು ನೀನು ಪ್ರೀತಿಸಿದಂತೆ ನಿನ್ನ ನೆರೆ ಹೊರೆಯವರನ್ನು ಪ್ರೀತಿಸು ಎನ್ನುವ ಅವರ ಸಂದೇಶ ವಿಶ್ವ ಶಾಂತ ವಾಗಿರಲು ಕಾರಣ ಅನ್ನೊದು ನಿರಾಕರಿಸಲಾಗದ ಸತ್ಯ ಅಲ್ವೇ. ಮಹಾತ್ಮಾ ಗಾಂದೀಜಿಯವರನ್ನೇ ತೆಗೆದು ಕೊಳ್ಳು. ವಿಶ್ವಕ್ಕೆ ಪ್ರೀತಿಯ , ಸತ್ಯದ ತಾಕತ್ತನ್ನು ಪರಿಚಯ ಮಾಡಿಕೊಟ್ಟ ಮಹಾನು ಚೇತನ ಅವರು. ಇಡೀ ವಿಶ್ವವೇ ಇಂದು ಅವರನ್ನು ಗೌರವಿಸುತ್ತದೆ. ನಿಜ ಪ್ರಪಂಚದ ಸರ್ವ ಜನರು ಶಾಂತಿಯಿಂದ , ಸಹೋದರತ್ವತೆಯಿಂದ ಸಹಬಾಳ್ವೆ ನಡೆಸಿದ್ರೆ ಎಷ್ಟೊಂದು ಚಂದ ಅಲ್ವ. ಭೂಮಿಯಲ್ಲಿ ದ್ವೇಷ ನಾಶವಾಗಿ ಪ್ರೀತಿ ಮಾತ್ರ ಉಳಿದ್ರೆ , ಸಕಲ ಜೀವ ಜಂತುಗಳಲ್ಲೇ ಶ್ರೇಷ್ಠವಾದ .ಜೀವನವನ್ನು ಪಡೆದ ಬಾಳಿಗೊಂದು ಸಾರ್ಥಕತೆ ಅಲ್ವೇ ಮಾರ್ಕ್. ಜಗತ್ತಿನಾದ್ಯಂತ ದ್ವೇಷ , ಕಪಟತನ , ಯುದ್ದೋನ್ಮಾದ , ಮತ್ಸರ , ಧರ್ಮಂದತೆ , ನಿನ್ನ ಮಾಧ್ಯಮಗಳ ಮೂಲಕ ವ್ಯಾಪಕವಾಗಿ ಹರಡುತ್ತಿದೆ ಎನ್ನುವ ಅರಿವು ನಿನಗೆ ಇದೆಯೇ ? ನೀನು ಫೇಸ್ ಬುಕ್ ಸ್ಥಾಪಿಸಿದಾಗ ನಿನ್ನ ಉದ್ದೇಶ ಒಳ್ಳೆಯದೇ ಆಗಿದ್ದಿರಬಹುದು. ಆದರೆ ಅದರ ಅಡ್ಡ ಪರಿಣಾಮಗಳು ಇಡೀ ವಿಶ್ವವನ್ನೇ ವಿನಾಶದ ಅಂಚಿಗೆ ತಳ್ಳುತಿದೆ. ಮನಸಿನೊಳಗೊಂದು ಭಾವ ಇಟ್ಟುಕೊಂಡು ಹೊರಗೆ ನಗು ಮುಖ ತೋರಿಸುತಿದ್ದ ಒಬ್ಬೊಬ್ಬರ ಮುಖವಾಡವು ಮುಖ ಪುಟದ ಮೂಲಕ ಕಳಚಿ ಬಿದ್ದು ಅವರ ವಿಕಾರ ಮುಖದ ದರ್ಶವಾಗುತಿದೆ. ಆದರೆ ಅವರಿಗೆ ಸಿಗುತ್ತಿರುವ ಬೆಂಬಲದಿಂದಾಗಿ ಈಗ ಎದುರು ಸಿಕ್ಕಾಗ ಕೂಡ ವಿಷಕಾರಲು ಅವರು ಹಿಂಜರಿಯುತಿಲ್ಲ. ಇದಕೆಲ್ಲ ಕಾರಣ ನಿನ್ನ ಸಂಸ್ಥೆಗಳು. ಎಷ್ಟೋ ಒಳ್ಳೆ ಕಾರ್ಯಗಳು

ನಿನ್ನ ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸಿಕೊಂಡು ನಡೆಯುತ್ತಿರೋದು ನಿಜವಾದ್ರೂ , ನಿನ್ನ ಮಾಧ್ಯಮಗಳನ್ನು ಜನ ಕೆಟ್ಟ ಉದ್ದೇಶಕ್ಕೆ ಬಳಸುತ್ತಿರುವುದು ಕೂಡ ಸುಳ್ಳಲ್ಲ. 

ನೋಡು ಮಾರ್ಕ್ ಬದುಕಿನಲ್ಲಿ ಯಾವುದು ಕೂಡ ಶಾಶ್ವತ ಅಲ್ಲ. ಹಾಗಿದ್ದ ಮೇಲೆ ನಿನ್ನ ಕೀರ್ತಿ , ಶ್ರೀಮಂತಿಕೆ ಕೂಡ ಕ್ಷಣಿಕ ಅಲ್ವೇ. ನೀನ್ಯಾಕೆ ವಿಶ್ವ ಮಾನವ ಸಂದೇಶವನ್ನು ಜಗತ್ತಿಗೆ ಸಾರಲು ಪ್ರಯತ್ನಿಸಬಾರದು. ನಿನ್ನ ಮಾಧ್ಯಮಗಳನ್ನು ಮಾನವನ ಒಳಿತಿಗೆ ಮಾತ್ರ ಬಳಸುವ ನಿರ್ಧಾರವನ್ನು ನೀನು ಕೈ ಗೊಂಡ್ರೆ ಜಗತ್ತಿನಲ್ಲಿ ನಿನ್ನ ಹೆಸರು ಚಿರಸ್ಥಾಯಿಯಾಗಿ ಉಳಿದು ಬಿಡುತ್ತೆ. ಈ ಹಾಳು ರಾಜಕೀಯವನ್ನು , ದ್ವೇಷ ಸಂದೇಶಗಳನ್ನು , ಭೀತಿವಾದವನ್ನು , ಯುದ್ದೋನ್ಮಾದವನ್ನು ಸಾರುವ ಸಂದೇಶಗಳನ್ನು , ವಿಡಿಯೋಗಳನ್ನು , ಲೇಖನಗಳನ್ನು , ಭಾಷಣಗಳನ್ನು ನಿನ್ನ ಮಾಧ್ಯಮಗಳಲ್ಲಿ ನಿಷೇದಿಸು. ನಿನಗೆ ವ್ಯವಹಾರ ಕಡಿಮೆಯಾಗಬಹುದು ನಿಜ . ಆದರೆ ಮನುಕುಲಕ್ಕೆ ಇದರಿಂದ ಖಂಡಿತ ಒಳಿತಾಗುತ್ತೆ.

ನಿನ್ನ ಮಾಧ್ಯಮಗಳನ್ನು ಕೇವಲ ಸ್ನೇಹ ಬಾಂಧ್ಯವ್ಯ ಬೆಸೆಯಲು, ವ್ಯಾಪಾರ ವಹಿವಾಟನ್ನು ವಿಸ್ತರಿಸಲು, ಕಲೆಯನ್ನು ಬೆಳೆಸಲು, ಸಂಸ್ಕ್ರತಿಯ ಅರಿವು ಮೂಡಿಸಲು, ಇತರರಿಗೆ ಬದುಕು ಕಟ್ಟಲು ಸಹಾಯ ಮಾಡಲು , ಯುವ ಜನರಿಗೆ ಉದ್ಯೋಗ ದೊರಕಿಸಿ ಕೊಡಲು , ಕಷ್ಟದಲ್ಲಿರುವವರಿಗೆ ನೆರವಾಗಲು, ಹಬ್ಬಗಳನ್ನು ಎಲ್ಲ ಒಂದಾಗಿ ಆಚರಿಸುವ ವೇದಿಕೆಯನ್ನಾಗಿ ಬಳಸಲು ಹೀಗೆ ಅಸಂಖ್ಯಾತ ಒಳ್ಳೆ ಕಾರ್ಯಗಳಿಗೆ ಮಾತ್ರ ಸೀಮಿತವಾಗಿಸುವಾತೆ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತೆಗೆದುಕೊಂಡು ಬಾ . ಮನುಕುಲ ನಿನ್ನ ಈ ಉಪಕಾರವನ್ನು ಎಂದಿಗೂ ಮರೆಯೋಲ್ಲ. ಯುದ್ಧ ಬೇಡ ಅಂತ ಇಡೀ ವಿಶ್ವವೇ ನಿನ್ನ ಮಾಧ್ಯಮದ ಮೂಲಕ ಸೆಟೆದು ನಿಲ್ಲೋದು ತುಂಬಾ ಸುಲಭ ಅನ್ನುವ ಅರಿವು ನಿನಗಿಲ್ಲದೆ ಏನು ಇಲ್ಲ.ನೀನು ಮನಸು ಮಾಡಿದರೆ , ನಿನ್ನ ಮಾಧ್ಯಮಗಳ ಮೂಲಕ ಒಂದು ಸುಂದರ , ಶಾಂತಿ ಸಹಬಾಳ್ವೆಯ ಪ್ರಪಂಚದ ನಿರ್ಮಾಣ ಸದ್ಯ ಇದೆ. ನೀನು ಮನಸು ಮಾಡಬೇಕು ಅಷ್ಟೇ.

 

ಪ್ರಕಾಶ್ ಮಲೆಬೆಟ್ಟು


0 likes

Published By

PAKASH DSOUZA

pakashdsouza

Comments

Appreciate the author by telling what you feel about the post 💓

Please Login or Create a free account to comment.