ಮಕ್ಕಳನ್ನು ಹೇಗೆ ಬೆಳೆಸಬೇಕು!

ಮಕ್ಕಳನ್ನು ಹೇಗೆ ಬೆಳೆಸಬೇಕು!

Originally published in kn
Reactions 0
406
PAKASH DSOUZA
PAKASH DSOUZA 01 Jun, 2021 | 1 min read

ಜೂನ್ 1 ನೇ ದಿನಾಂಕವನ್ನು ವಿಶ್ವಸಂಸ್ಥೆ ಜಾಗತಿಕ ಪೋಷಕರ ದಿನವನ್ನಾಗಿ ಆಚರಿಸುತ್ತದೆ. ಕುಟುಂಬವು ಮಕ್ಕಳ ಪೋಷಣೆ ಮತ್ತು ರಕ್ಷಣೆಯ ಪ್ರಾಥಮಿಕ ಜವಾಬ್ದಾರಿಯನ್ನು ಹೊಂದಿದೆ ಎಂದು ನಮಗೆಲ್ಲ ಅರಿವಿದೆ. ಮಗುವಿನ ಬೆಳವಣಿಗೆಯಲ್ಲಿ ಕುಟುಂಬದ ಪಾತ್ರದ ಬಗ್ಗೆ 1980 ರ ನಂತ್ರ ವಿಶ್ವಸಂಸ್ಥೆ ಅನೇಕ ನಿರ್ಣಯಗಳನ್ನು ಕೈಗೊಂಡಿದೆ. ಮಕ್ಕಳ ವ್ಯಕ್ತಿತ್ವದ ಪೂರ್ಣ ಮತ್ತು ಸಾಮರಸ್ಯದ ಬೆಳವಣಿಗೆಗಾಗಿ, ಅವರು ಕುಟುಂಬ ಪರಿಸರದಲ್ಲಿ ಸಂತೋಷ, ಪ್ರೀತಿ ಮತ್ತು ತಿಳುವಳಿಕೆಯ ವಾತಾವರಣದಲ್ಲಿ ಬೆಳೆಯಬೇಕು. ಮಕ್ಕಳ ಎದುರಿನಲ್ಲಿ ಮತ್ತು ಅವರೊಂದಿಗೆ ನಮ್ಮ ವರ್ತನೆ ಹೇಗಿರಬೇಕು ಎನ್ನುವುದರ ಬಗ್ಗೆ ಒಂದು ಬೆಳಕು ಚೆಲ್ಲುವ ಪ್ರಯತ್ನ ನಾನಿಲ್ಲಿ ಮಾಡುತಿದ್ದೀನೆ. ಮಕ್ಕಳೊಂದಿಗೆ ನಾವು ಎಲ್ಲ ಸಮಯದಲ್ಲೂ ಒಂದೇ ರೀತಿಯಲ್ಲಿ ವರ್ತಿಸಲು ಸಾಧ್ಯವಿಲ್ಲ ಎನ್ನುವುದು ನಿಜವಾದ್ರೂ, ಸ್ಥಿತ ಪ್ರ್ರಜ್ಞತೆಯಿಂದ ವರ್ತಿಸುವ ನಮ್ಮ ಪ್ರಯತ್ನವನ್ನು ನಾವೆಂದಿಗೂ  ಕೈ ಬಿಡಬಾರದು.

ಕೋಪ ತಾಪ ಬಿನ್ನಾಭಿಪ್ರಾಯ ಮಕ್ಕಳ ಎದುರಿನಲ್ಲಿ ಬೇಡ!

ಸಂಸಾರ ಅಂದ ಮೇಲೆ ಕೋಪ ತಾಪ ಜಗಳ ಇದ್ದದ್ದೇ ಅಂತ ನಾವು ಹಲವಾರು ಬಾರಿ ನಮ್ಮನ್ನೇ ನಾವು ಸಮಾಧಾನಗೊಳಿಸಿಕೊಳ್ಳುತೇವೆ. ನಿಜ ಹೇಳ್ಬೇಕಂದ್ರೆ ಸಂಸಾರ ಅಂತ ಅಲ್ಲ ಮನುಷ್ಯನಾಗಿ ಹುಟ್ಟಿದ ಮೇಲೆ  ನಾವು ಬೆಳೆದ ಪರಿಸರ  ಮತ್ತು ವಾತಾವರಣ ಸದ್ಗುಣಗಳೊಂದಿಗೆ, ದುರ್ಗುಣಗಳನ್ನು ಕೂಡ ನಮ್ಮೊಳಗೇ ಮೈದೋರುವಂತೆ ಮಾಡಿಬಿಡುತ್ತೆ. ಒಬ್ಬಳು ಹುಡುಗಿ ಒಮ್ಮೆ ಕಣ್ಣು ಮುಚ್ಚಿ ದೇವರ ಬಳಿ ಪ್ರಾರ್ಥಿಸುತಿದ್ದಳು. ಅವಳು ಕಣ್ಣು ಬಿಟ್ಟಾಗ ಅವಳನ್ನು ಗಮನಿಸುತ್ತಿದ್ದ ಅವಳ ಪರಿಚಯಸ್ಥ ಆಂಟಿ ಕೇಳ್ತಾರೆ ಮಗು ನೀನು ಏನಂತ ಪ್ರಾರ್ಥನೆ ಮಾಡಿದೆ ದೇವರ ಬಳಿ ? ಆಂಟಿ ನನ್ನ ಕುಟುಂಬವನ್ನು ಸದಾ ಉಲ್ಲಾಸದಿಂದ , ಸಂತೋಷದಿಂದ ಕೂಡಿರುವ ಕುಟುಂಬವನ್ನಾಗಿ ಪರಿವರ್ತಿಸು ಭಗವಂತ ಅಂತ ಬೇಡಿಕೊಂಡೆ ಅಂತಾಳೆ . ನಿಜ ನಾವು ಭಗವಂತನಲ್ಲಿ ನಮ್ಮಲ್ಲಿ ಯಾವುದಿಲ್ಲವೋ ಅದಕೋಸ್ಕರ ಬೇಡಿಕೊಳ್ಳುತೇವೆ. ಮನೆಯಲ್ಲಿ ಅಶಾಂತಿ ತುಂಬಿಕೊಂಡಿದ್ದರೆ , ಮಕ್ಕಳು ಸಂತೋಷದಿಂದ ಬೆಳೆಯಲು ಹೇಗೆ ಸದ್ಯ! ಗಂಡ ಹೆಂಡತಿ ನಡುವೆ ಎಷ್ಟೇ ಬಿನ್ನಾಭಿಪ್ರಾಯ ಬರಲಿ , ಕೋಪ ದ್ವೇಷ ಏನೆ ಮೂಡಲಿ, ಮಕ್ಕಳ ಮುಂದೆ ಅದನ್ನು ತೋರ್ಪಡಿಸಲೇ ಬಾರದು!

ಇರಬಹುದು ನಮಗೆ ಕಚೇರಿಯಲ್ಲಿ ತುಂಬಾ ಒತ್ತಡ! ಅದರಲ್ಲೂ ಇಬ್ಬರು ಕೆಲಸಕ್ಕೆ ಹೋಗುತಾರದ್ರೆ , ಮನೆಗೆ ತಲುಪುವಷ್ಟರಲ್ಲಿ ಆಯಾಸಗೊಂಡು ದಣಿದಿರುತ್ತದೆ ದೇಹ. ಮತ್ತೆ ಮನೆಯ ಕೆಲಸಗಳನ್ನು ಪೂರ್ಣಗೊಳಿಸುವಷ್ಟರಲ್ಲಿ ಯಾಕಪ್ಪ ಬೇಕಿತ್ತು ಮದುವೆ ಮನೆ ಮಕ್ಕಳು ಅಂತ ಅನಿಸೋದು ಸುಳ್ಳಲ್ಲ. ಹಾಗಾಗಿ ಪರಸ್ಪರ ಅಸಹನೆ , ಜಗಳ , ಮಾತಿಗೆ ಮಾತು ಬೆಳೆಯುವುದು ಸಹಜ ! ಆದರೆ ನಾವು ನೆನಪಿಡಬೇಕು ನಮ್ಮ ಈ ವರ್ತನೆ ಮಕ್ಕಳ ಜೀವನದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತೆ. ಅವರ ಮನದೊಳಗೆ ಒಮ್ಮೆ ಭಯ , ಅಂತಂಕ , ಅಶಾಂತಿ ತುಂಬಿ ಕೊಂಡು ಬಿಟ್ಟರೆ ಅದು ಜೀವನದುದ್ದಕ್ಕೂ ಅವರನ್ನು ಕಾಡದೆ ಬಿಡದು. ನಮ್ಮ ಅಶಾಂತಿಯ ಜೀವನ ಮುಂದೆ ಆ ಮಕ್ಕಳು ಕುಟುಂಬ ಜೀವನಕ್ಕೆ ಕಾಲಿಡುವಾಗ ಅಲ್ಲಿ ಕೂಡ ಮುಂದುವರೆದರೆ ಆಶ್ಚರ್ಯ ಏನು ಇಲ್ಲ. ಮಕ್ಕಳು ಯಾಕಾದ್ರೂ ಬೇಕಿತ್ತು ನಮಗೆ ಅಂತ ಯೋಚನೆ ಮಾಡುವ ಮೊದಲು ಒಮ್ಮೆ ನಾವು ಶಾಂತವಾಗಿ ಯೋಚಿಸಬೇಕು, ಎಷ್ಟೊಂದು ಸಂತಸ , ಸಂಭ್ರಮ , ಸಡಗರ , ಪ್ರೀತಿಯಿಂದ ಆ ಮಗುವನ್ನು ನಾವು ಪ್ರಪಂಚಕ್ಕೆ ಬರಮಾಡಿಕೊಂಡಿದ್ವಿ. ಗಂಡ ಹೆಂಡತಿಯ ನಡುವೆ ಎಷ್ಟೊಂದು ಪ್ರೀತಿ ಇತ್ತು ಆ ಸಂದರ್ಭದಲ್ಲಿ . ನಮ್ಮ ಪ್ರೀತಿಯ ಕುರುಹು ನಮ್ಮ ಮಕ್ಕಳು ಎನ್ನುವುದನ್ನು ನಾವು ಮರೆಯಬಾರದವು. ಹಾಗಾಗಿ ಗಂಡ ಹೆಂಡತಿಯ ನಡುವೆ ಯಾವುದೇ ಬಿನ್ನಾಭಿಪ್ರಾಯ ಇರಲಿ ಮಕ್ಕಳ ಮುಂದೆ ಅದನ್ನು ಪ್ರದರ್ಶಿಸುವುದು ಬೇಡ. ಎಷ್ಟೇ ಕೋಪ ಬರಲಿ ಆ ಕ್ಷಣಕ್ಕೆ ಮಕ್ಕಳು ಇದ್ದಾರೆ ಎನ್ನುವ ಕಾರಣಕ್ಕೆ ನಮ್ಮ ಕೋಪವನ್ನು ತಡೆಹಿಡಿದು ಬಿಟ್ಟರೆ ತುಂಬಾ ಲಾಭ ಇದೆ. ಸಲ್ಪ ಸಮಯದ ನಂತ್ರ ಮನಸು ಶಾಂತವಾಗಿ ನಮ್ಮ ಕೋಪ ಮರೆತುಕೂಡ ಹೋಗಬಹುದು. ಮುಗ್ದ ಮಕ್ಕಳ ಬಾಲ್ಯವನ್ನು ನಾವು ನಮ್ಮ ಕೋಪ ತಾಪಗಳಿಂದ ಹಾಳುಗೆಡವುದು ಬೇಡ.

ಪರಸ್ಪರ ಗೌರವಿಸುವುದನ್ನು ಕಲಿಸಿಕೊಡಬೇಕು!

ನಮ್ಮಲ್ಲಿ ಅನೇಕ ದಂಪತಿಗಳಲ್ಲಿ ಒಂದು ಕೆಟ್ಟ ಅಭ್ಯಾಸ ಇದೆ. ನಮ್ಮ ಭಿನ್ನಾಭಿಪ್ರಾಯಗಳನ್ನು ಮಕ್ಕಳ ಮುಂದೆ ಹೇಳಿ, ಅಪ್ಪ ಅಮ್ಮನನ್ನು ಮತ್ತು ಅಮ್ಮ ಅಪ್ಪನನ್ನು ಖಳನಾಯಕ ಇಲ್ಲವೇ ಖಳನಾಯಕಿಯನ್ನಾಗಿ ಮಾಡೋದು. ನಾವು ಒಂದು ನೆನಪಿಡಬೇಕು. ದಂಪತಿಗಳ ಬಾಂಧವ್ಯದ ನಡುವೆ ಮಕ್ಕಳು ಬರಬಾರದು. ಗಂಡ ಹೆಂಡತಿಯನ್ನು ಮತ್ತು ಹಂಡತಿ ಗಂಡನನ್ನು ಎಷ್ಟು ಗೌರವಿಸುತಾರೆಯೋ ಅಷ್ಟೇ ಗೌರವ ಮಕ್ಕಳು ಇಬ್ಬರಿಗೂ ಕೊಡಮಾಡುತಾರೆ. ಆ ಭಾವನೆಯನ್ನು ನಾವು ಬಾಲ್ಯದಿಂದಲೇ ಮಕ್ಕಳ ಮನಸಿನಲ್ಲಿ ಮೂಡಿಸದಿದ್ದ್ರೆ , ಮುಂದೆ ಮಕ್ಕಳು ಬೆಳೆದು ದೊಡ್ಡವರಾದಮೇಲೆ ನಮ್ಮನ್ನು ನಿಷ್ಕ್ರಷ್ಟವಾಗಿ ಕಂಡ್ರೆ ತಪ್ಪು ನಮ್ಮದೇ!

ನಿನ್ನ ಅಪ್ಪ ಸೋಮಾರಿ , ಅಹಂಕಾರಿ ಹೀಗೆ ಅಮ್ಮ ಮಕ್ಕಳಿಗೆ ಹೇಳಿಕೊಟ್ಟರೆ ಮಕ್ಕಳಿಗೆ ಅಪ್ಪನ ಬಗ್ಗೆ ಗೌರವ ಮುಡೋದಾದ್ರೂ ಹೇಗೆ ? ಲೇ ನಿನಗೆ ಬುದ್ದಿ ಇಲ್ಲ ನೀನು ಪೆದ್ದಿ ಅಂತ ಗಂಡ ಮಕ್ಕಳ ಎದುರಿನಲ್ಲಿ ಹೆಂಡತಿಗೆ ಬೈದ್ರೆ ಅಮ್ಮ ಪೆದ್ದಿ ಅಂತ ಮಕ್ಕಳು ಕೂಡ ಹೇಳತೊಡಗುತಾರೆ. ಹಾಗಾಗಿ ನಾವು ನೆನಪಿಡಬೇಕು, ಯಾವುದೇ ಸಂದರ್ಭ ಬರಲಿ, ಮಕ್ಕಳ ಎದುರಿನಲ್ಲಿ ನಾವು ಪರಸ್ಪರ ಅಗೌರವ ತೋರಬಾರದು. ಹೆಂಡತಿಯ ಬಗ್ಗೆ ಗಂಡ ಮತ್ತು ಗಂಡನ ಬಗ್ಗೆ ಪತ್ನಿ ಯಾವಾಗಲು ಮಕ್ಕಳ ಬಗ್ಗೆ ಒಳ್ಳೆ ವಿಚಾರಗಳನ್ನೇ ಮಾತನಾಡಬೇಕು. ಪೋಷಕರನ್ನು ಗೌರವಿಸಲು ಕಲಿಯುವ ಮಕ್ಕಳು ಮುಂದೆ ಇತರರರನ್ನು ಕೂಡ ಗೌರವಿಸಲು ಕಲಿಯುತ್ತಾರೆ.

ಮಕ್ಕಳ ಎದುರಿನಲ್ಲಿ ಬಳಸುವ ಭಾಷೆಯ ಮೇಲೆ ನಮ್ಮ ಹಿಡಿತವಿರಲಿ!

ನಾವು ನಮ್ಮ ಮಕ್ಕಳಿಗೆ ಅವರು ಶಾಲೆಗೆ ಹೋಗಲು ಶುರುಮಾಡುವ ತನಕ ಕೆಲವು ಶಬ್ದಗಳ ಪರಿಚಯ ಮಾಡಿಯೇ ಕೊಟ್ಟಿರಲಿಲ್ಲ. ಉದಾಹರಣೆಗೆ ಕೆಲವರು ಮಕ್ಕಳ ಬಳಿ ಮಾತನಾಡೋದು ಕೇಳಿದ್ದೀನಿ. ಪುಟ್ಟಿ ನೀನು ಗುಡ್ ಗರ್ಲಾ ಇಲ್ಲ ಬ್ಯಾಡ್ ಗರ್ಲಾ ! ಒಳ್ಳೆಯದು ಕೆಟ್ಟದರ ಅರಿವು ಮೂಡಿಸಬೇಕು ನಿಜ ! ಆದರೆ ಅತಿ ಚಿಕ್ಕ ಪ್ರಾಯದಲ್ಲಿ ಅಲ್ಲ. ಅದೇ ಪುಟ್ಟಿ ಅಮ್ಮ ಯಾವುದೊ ಕಾರಣಕ್ಕೆ ಕೋಪ ಮಾಡಿಕೊಂಡಾಗ ಅಮ್ಮ ನೀನು ಕೆಟ್ಟವಳು , ನೀನು ತುಂಬಾ ಬ್ಯಾಡ್ ಅಂತ ಹೇಳುವಾಗ ಹೇಗಾಗುತ್ತೆ ತಾಯಿಯ ಮನಸಿಗೆ! ಒಮ್ಮೆ ಮಗಳಿಗೆ ಅವಳ ಅಮ್ಮ ಹೇಳಿದ್ಲು ನೀನು ಬೇಗ ಊಟ ಮಾಡದಿದ್ದರೆ ರೂಮಿಗೆ ಬರ್ಲಿಕ್ಕೆ ಇಲ್ಲ , ಬಾಲ್ಕನಿಯಲ್ಲಿ ಮಲಗಬೇಕು ನೀನು. ಕೆಲವು ದಿನಗಳ ನಂತ್ರ ಯಾವುದಕ್ಕೋ ಕೋಪಿಸಿಕೊಂಡ ಮಗಳು ಅಮ್ಮನಿಗೆ ಹೇಳ್ತಾಳೆ, ನೀನು ರೂಮಿಗೆ ಬರಬೇಡ ! ಬಾಲ್ಕನಿಯಲ್ಲಿ ಹೋಗಿ ಮಲಗು. ಮಕ್ಕಳಿಗೆ ಒಳ್ಳೆ ಮಾತು , ಒಳ್ಳೆ ವಿಚಾರಗಳನ್ನು ಕಲಿಸಿಕೊಡೋದು ನಮ್ಮ ಕೈಯಲ್ಲೇ ಇದೆ. ನಾವು ಕೆಟ್ಟ ಬೈಗುಳ, ಕೆಟ್ಟ ಶಬ್ದ ಉಪಯೋಗಿಸಿದ್ರೆ , ಮಕ್ಕಳು ಕೂಡ ನಮ್ಮನ್ನು ಹಿಂಬಾಲಿಸುತ್ತಾರೆ. ಮಕ್ಕಳ ಸಂಸ್ಕಾರವಂತರಾಗಿ ನಾವು ಬೆಳೆಸಿದ್ರೆ ಆ ಸಂಸ್ಕಾರ  ಜೀವನದುದ್ದಕ್ಕೂ ಅವರು ರೂಡಿಸಿಕೊಳ್ಳುತ್ತಾರೆ.

ಬದುಕನ್ನು ಸಮರ್ಥವಾಗಿ ಎದುರಿಸಲು ಬಾಲ್ಯದಿಂದಲೇ ತರಬೇತಿ ಅಗತ್ಯ !

ಬದುಕು ಪ್ರತಿಕ್ಷಣ ಹೊಸ ಸವಾಲುಗಳನ್ನು ಒಡ್ಡುತ್ತದೆ. ಅದನ್ನು ಸಮರ್ಥವಾಗಿ ಎದುರಿಸಲು ನಾವು ಮಕ್ಕಳನ್ನು ತರಬೇತು ಗೊಳಿಸಬೇಕು. ಕೆಲವರಿಗೆ ಒಂದು ಕೆಟ್ಟ ಚಳಿ ಇರುತ್ತೆ! ಮಗು ನಿನಗೆ ಅಪ್ಪ ಇಷ್ಟನಾ, ಅಮ್ಮ ಇಷ್ಟ ? ಯಾರು ತುಂಬಾ ಇಷ್ಟ? ಅಮ್ಮ ಒಳ್ಳೆಯವಳ , ಅಪ್ಪ ಒಳ್ಳೆಯವನ , ನನ್ನ ಬಗ್ಗೆ ನಿನ್ನ ಅಮ್ಮ ಏನು ಹೇಳಿದ್ದಳು, ಇಲ್ಲವೇ ನಿನ್ನ ಅಮ್ಮನಿಗೆ ಕೊಬ್ಬು ಜಾಸ್ತಿ , ನಿನ್ನ ಅಪ್ಪ ಸುಳ್ಳ ಹೀಗೆ ಒಂದೇ ಎರಡೇ ! ಮಕ್ಕಳ ಮನಸ್ಸನ್ನು ಕಲುಷಿತ ಗೊಳಿಸುವ ಸಂಬಂಧಿಕರಿಗೆ , ಗೆಳೆಯರಿಗೆ ಕೊರತೆ ಇರೋದಿಲ್ಲ ! ಅವರೆಲ್ಲರಿಗೂ ಸಮರ್ಥ ಉತ್ತರ ಮಗು ಕೊಡಬೇಕಾದ್ರೆ ಆ ಒಳ್ಳೆ ವಾತಾವರಣ ಮನೆಯಲ್ಲಿ ಇರಬೇಕು. ಆಗ ನಾವು ಏನು ಹೇಳಿಕೊಡಬೇಕೆಂದೇ ಇಲ್ಲ. ನನ್ನ ಅಮ್ಮ ಅಪ್ಪನ ಬಗ್ಗೆ ನನಗೆ ತುಂಬಾ ಚೆನ್ನಾಗಿ  ಗೊತ್ತು ! ನೀವು ಹೇಳೋದು ಬೇಡ ಅನ್ನುವ ಮುಗುಳು ನಗೆಯ ಉತ್ತರ ಮಕ್ಕಳು ಕೊಡುತ್ತಾರೆ. ಇನ್ನು ಕೆಲವರಿಗೆ ನಮ್ಮ ಮನೆಯ ವಿಚಾರ ತಿಳಿದುಕೊಳ್ಳುವ ಕುತೂಹಲ. ಹಾಗಾಗಿ ಮಕ್ಕಳ ಬಳಿ ವಿಚಾರಿಸುತ್ತಾರೆ. ನಮ್ಮ ಕರ್ತವ್ಯ ಮಕ್ಕಲ್ಲಿ ನಮ್ಮ ಕುಟುಂಬದ ಬಗ್ಗೆ ಪ್ರೀತಿ , ಗೌರವ , ಹೆಮ್ಮೆಯನ್ನು ಮೂಡಿಸೋದು. ಆಗ ಯಾರ ಬಳಿ ಹೇಗೆ ಮಾತನಾಡಿಸಬೇಕು ಎನ್ನುವ ಅರಿವು ಮಕ್ಕಳಲ್ಲಿ ಮೂಡುತ್ತೆ.

ಮಕ್ಕಳನ್ನು ಸರಿಯಾದ ದಾರಿಯಲ್ಲಿ ಬೆಳೆಸೋದು ಒಂದು ತುಂಬಾ ಕಠಿಣವಾದ ಕೆಲಸ ! ಕಲ್ಲನ್ನು ಕೆತ್ತಿ ಶಿಲ್ಪಿ ಮಾಡಿದ ಹಾಗೆ. ಇದೊಂದು ಸುಮುದ್ರದಂತೆ! ಎಷ್ಟು ಅರಿವು, ಎಚ್ಚರ ಇದ್ರು ಸಾಲದು. ಮುಂದೆ ಇದರ ಬಗ್ಗೆ ಇನ್ನು ಹೆಚ್ಚಿಗೆ ಬರೆಯುತೇನೆ. ಪಾಲಕರೆಲ್ಲರಿಗೂ "ಜಾಗತಿಕ ಪೋಷಕರ ದಿನಚರಣೆಯ" ಶುಭಾಶಯಗಳು. ಒಂದು ಸಂತೋಷಮಯವಾದ ಕುಟುಂಬ ನಮ್ಮೆಲ್ಲರದಾಗಲಿ.

ಪ್ರಕಾಶ್ ಮಲೆಬೆಟ್ಟು

0 likes

Published By

PAKASH DSOUZA

pakashdsouza

Comments

Appreciate the author by telling what you feel about the post 💓

Please Login or Create a free account to comment.