ಪರಿಸರ ಮಾಲಿನ್ಯವು ಸಮಸ್ಯೆಗಳ ಆಕರ!! (ಭಾಗ - 2)

ಪ್ರಸ್ತುತ ದಿನಗಳಲ್ಲಿ ನಾವು ನಮ್ಮ ಸುಂದರ ಮತ್ತು ವಿಶಾಲವಾದ ಪರಿಸರವನ್ನು ಸುಖಕ್ಕೋಸ್ಕರ ಅದನ್ನು ಕೆಡಕುಗೊಳಿಸಿ ಮುಂದಿನ ಪೀಳಿಗೆಯ ಜನರು ಪರಿಸರದ ಮಾಲಿನ್ಯದ ಜತೆ ಬದುಕುವ ಪರಿಸ್ಥಿತಿಯನ್ನು ತಂದಿಟ್ಟಿದ್ದೇವೆ.

Originally published in kn
Reactions 0
494
Deepak Shenoy
Deepak Shenoy 29 Sep, 2020 | 1 min read
Nature Our Environment Pollution

ದೊಡ್ಡ ದೊಡ್ಡ ಕಾರ್ಖಾನೆಗಳನ್ನು ಆರಂಭಿಸಿ ನಾವು ನೆಲ, ಜಲ, ಗಾಳಿ, ಆಕಾಶ ಎಲ್ಲವನ್ನೂ ಕಲ್ಮಶಗೊಳಿಸುತ್ತಿದ್ದೇವೆ. ಪ್ರಕೃತಿಯ ಜಲಸಾಗರಕ್ಕೆ ಪ್ರತಿಸ್ಫರ್ಧಿಯೆನ್ನುವಂತೆ ರಾಸಾಯನಿಕದ ಸಾಗರವನ್ನು ಸೃಷ್ಠಿಸುತ್ತಿದ್ದೇವೆ. ಪ್ರಕೃತಿದತ್ತವಾಗಿ ದೊರಕುವ ಶುದ್ಧ ನೀರನ್ನು ಸಹ ಸೋಸಿ ಕುಡಿಯುವ ದುಃಸ್ಥಿತಿಗೆ ಬಂದು ತಲುಪಿದ್ದೇವೆ. ಕೇವಲ ನಮ್ಮ ಒಂದೇ ದೇಶದಲ್ಲಿ ಪ್ರತಿ ವರ್ಷ ೯೦ ಲಕ್ಷ ಟನ್‌ಗಿಂತ ಅಧಿಕ ವಿಷಪೂರಿತ ಕೈಗಾರಿಕಾ ತ್ಯಾಜ್ಯವನ್ನು ಪರಿಸರಕ್ಕೆ ಹಾಗೂ ಸುಮಾರು ೮೬,೩೧೧ ಟನ್‌ಗಳಷ್ಟು ಕ್ರೀಮಿನಾಶಕಗಳನ್ನು ಭೂತಾಯಿಗೆ ಉಣಿಸುತ್ತಿದ್ದೇವೆ. ಕಟ್ಟಕಡೆಗೆ ಆ ಕೈಗಾರಿಕಾ ತ್ಯಾಜ್ಯ, ಕ್ರೀಮಿನಾಶಕದೊಳಗಿನ ವಿಷ ನದಿ, ಕೆರೆ, ಬಾವಿ ಇತ್ಯಾದಿ ಜಲಮೂಲಗಳಿಗೆ ಸೇರಿ ಪರಸರವನ್ನು ಹದಗೆಡಿಸಿ ಜೀವಿಗಳ ಹಾಗೂ ಜಲಚರಗಳ ಶರೀರದೊಳಗೆ ಪ್ರವೇಶಿಸಿ ಮಾರಣಾಂತಿಕ ಕಾಯಿಲೆಗಳನ್ನು ತರುತ್ತವೆ. 

 ಪರಿಸರ ಮಾಲಿನ್ಯದ ಪ್ರಮುಖ ಅಂಶಗಳೆಂದರೆ ವಾಯುಮಾಲಿನ್ಯ, ಜಲಮಾಲಿನ್ಯ ಹಾಗೂ ಪರಿಸರ ಮಾಲಿನ್ಯ. ವಿಶ್ವ ಆರೋಗ್ಯ ಸಂಘಟನೆಯು ಅಂದಾಜಿಸಿದಂತೆ ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ೭೫ ಶೇಕಡಾಕ್ಕಿಂತ ಅಧಿಕ ಜನರು (ಸುಮಾರು ೫.೫ಬಿಲಿಯನ್) ನಿಗದಿತ ಪ್ರಮಾಣಕ್ಕಿಂತ ಅಧಿಕ ಮಾಲಿನ್ಯವಿರುವ ಪ್ರದೇಶದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮಾಲಿನ್ಯದ ಕಾರಣದಿಂದ ದೊಡ್ಡ ಪ್ರಮಾಣದಲ್ಲಿ ಮರಣಗಳೂ ಸಂಭವಿಸುತ್ತಿವೆ. ಕೇವಲ ವಾಯುಮಾಲಿನ್ಯದಿಂದಲೇ ವರ್ಷಕ್ಕೆ ೪ ಮಿಲಿಯನ್‌ನಷ್ಟು ಜನ ಸಾಯುತ್ತಿದ್ದಾರೆ. ಈ ಸಾವುಗಳಿಗೆ ತೀವ್ರತರವಾದ ಆಸ್ತಮಾ, ಗಂಟಲು ಉರಿಯೂತ, ಶ್ವಾಸಕೋಶ ಮತ್ತು ಹೃದಯ ಸಂಬಂಧಿ ರೋಗಗಳು, ಅಲರ್ಜಿ, ಪುಪ್ಪಸದಲ್ಲಿ ಆಗುವ ರಂಧ್ರ, ಉಸಿರಾಡಲು ತೊಂದರೆಯಾಗುವುದು, ಶ್ವಾಸಕೋಶದ ಕ್ಯಾನ್ಸರ್ ಇತ್ಯಾದಿ ಕಾರಣಗಳು ವಾಯುಮಾಲಿನ್ಯದ ನೇರ ಬಳುವಳಿಯಾಗಿವೆ. ಅದೇ ರೀತಿ ಜಲಮಾಲಿನ್ಯದಿಂದಲೂ ದಿನಂಪ್ರತಿ ೧೪ ಸಾವಿರ (ವರ್ಷಕ್ಕೆ ೫೧,೧೦,೦೦೦) ಜನರು ಸಾಯುತ್ತಿದ್ದಾರೆ. ಕಾಲರಾ, ಅತಿಸಾರ, ಕಾಮಾಲೆ ಇತ್ಯಾದಿ ಕಾಯಿಲೆಗಳೇ ಇದಕ್ಕೆ ಕಾರಣ. ಶಬ್ಧ ಮಾಲಿನ್ಯದಿಂದಲೂ ಕಿವುಡು, ಕಣ್ಣಿನ ರೋಗಗಳು, ಮಾನಸಿಕ ಒತ್ತಡ ಉಲ್ಬಣಿಸುತ್ತದೆ. ಮಾಲಿನ್ಯದ ಕಾರಣದಿಂದ ವಾಯುಮಂಡಲದ ಓಜೋನ್ ಪದರಕ್ಕೆ ಘಾಸಿಯಾದರೆ ಸೂರ್ಯನಿಂದ ಹೊರಟ ಅತಿನೇರಳೆ ಕಿರಣಗಳು ಅಡೆತಡೆ ಇಲ್ಲದೇ ನೇರವಾಗಿ ಭೂಮಿಗೆ ತಲುಪಿ ಚರ್ಮದ ಕ್ಯಾನ್ಸರ್, ಕಣ್ಣಿನ ಕಾಯಿಲೆಗಳಿಗೆ ಕಾರಣವಾಗಬಹುದು. ಪರಿಸರ ಮಾಲಿನ್ಯದಿಂದ ಆಮ್ಲಮಳೆ ಸುರಿದರೆ ಭೂಮಿಯ ಫಲವತ್ತತೆ ನಾಶವಾಗಿ ಆಹಾರಕ್ಕಾಗಿ ಹಾಹಾಕಾರ ಪಡುವಂತಹ ಪರಿಸ್ಥಿತಿ ತಲೆದೋರಬಹುದು. 

ಹಸಿರಿನ ನಾಶದಿಂದ ಇಂಗಾಲದ ಡೈ ಆಕ್ಸೈಡ್ ಹಾಗೂ ಮೀಥೇನ್ ಅನಿಲಗಳ ಪ್ರಮಾಣ ಹೆಚ್ಚಾಗಿ ಮನುಷ್ಯನ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಭೂಮಿಯ ಉಷ್ಣತೆಯೂ ಹೆಚ್ಚಾಗಿ ಅದರಿಂದಲೂ ಮನುಷ್ಯ ಪರದಾಡ ಬೇಕಾಗುತ್ತದೆ. ೧೯೮೪ರಲ್ಲಿ ಭೂಪಾಲದಲ್ಲಿನ ಅನಿಲ ದುರಂತದಲ್ಲಿ ೩೭೮೭ ಅಮೂಲ್ಯ ಜೀವಗಳು ಆಹುತಿಯಾದರೆ, ೫,೭೪,೩೬೬ ಜನ ದೈಹಿಕ ಅಂಗವಿಕಲತೆಗೆ ಒಳಗಾದರು, ಮಹಾನಗರಗಳಲ್ಲಿ ಜನರು ಬೇಕಾಬಿಟ್ಟಿಯಾಗಿ ಎಸೆಯುವ ಕಸಕಡ್ಡಿಗಳಿಂದ ಮಳೆಗಾಲದಲ್ಲಿ ಮಳೆನೀರು ಹರಿಯಲು ತೊಂದರೆಯಾಗಿ ಕೃತಕ ನೆರೆ ಸೃಷ್ಠಿಯಾಗಿ ಹಲವಾರು ಜನ ಅಸುನೀಗುವುದು ಇಂದು ಎಲ್ಲೆಡೆ ಸಾಮಾನ್ಯವಾಗಿದೆ. ಕರೋನಾ ವೇಳೆಯಲ್ಲಿ ಮಾಸ್ಕ್ ಬಳಕೆ ಹಾಗೂ ಶಾರೀರಿಕ ಸ್ವಚ್ಚತೆಯಿಂದ ವಿವಿಧ ಸೋಂಕು ರೋಗಗಳ ಸಂಖ್ಯೆಯಲ್ಲಿ ಇಳಿಕೆಯಾಗಿರುವುದು ಮನುಷ್ಯನು ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯನ್ನು ತೋರಿಸುತ್ತದೆ.

ಒಟ್ಟಾರೆಯಾಗಿ ಪರಿಸರ ಮಾಲಿನ್ಯ ಮನುಷ್ಯನ ಆರೋಗ್ಯ, ಜನಜೀವನದೊಂದಿಗೆ ಇತರ ಜೀವಿಗಳ ಮೇಲೂ ದುಷ್ಪರಿಣಾಮ ಬೀರುತ್ತದೆ. ಅದರಿಂದ ಅವುಗಳ ಸಂತತಿಯೇ ನಾಶವಾಗಿ ಜೈವಿಕ ಸರಪಣೆಯೆ ತುಂಡಾದರೂ ಅಚ್ಚರಿ ಇಲ್ಲ. ಪರಿಸರ ಮಾಲಿನ್ಯವು ಆರೋಗ್ಯ ಮಾತ್ರವಲ್ಲ ಬಹಳಷ್ಟು ಸಮಸ್ಯೆಗಳ ಆಕರವೂ ಆಗಿದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. 

0 likes

Published By

Deepak Shenoy

deepakshenoy

Comments

Appreciate the author by telling what you feel about the post 💓

Please Login or Create a free account to comment.