ಮಾಧ್ಯಮದ ಹಿರಿಯಣ್ಣ ಪಕ್ಷಪಾತಿಯಾಗದಿರಲಿ!

ಮಾಧ್ಯಮದ ಹಿರಿಯಣ್ಣನಾದ ಪತ್ರಿಕೋದ್ಯಮಿ ಪಕ್ಷಪಾತಿ ಆದರೆ ದುರ್ಬಲರ, ಶೋಷಿತರ ಕಷ್ಟಕ್ಕೆ ಸ್ಪಂದಿಸುವವರು ಯಾರು? ಆದ್ದರಿಂದ ಪತ್ರಿಕೋದ್ಯಮಿಗಳು ಪಕ್ಷಪಾತಿಗಳಾಗದಿರಲೆಂದು ಆಶಿಸೋಣ.

Originally published in kn
Reactions 1
501
Deepak Shenoy
Deepak Shenoy 17 Sep, 2020 | 1 min read
Indian Media

ಮನುಷ್ಯರು ಸಂಘಜೀವಿಗಳು. ಸಂವಹನ ಎಂಬ ಹಸಿವು ಅವನನ್ನು ಯಾವಾಗಲೂ ಪೀಡಿಸುತ್ತಿರುವುದರಿಂದ ಸಂವಹನಕ್ಕಾಗಿ ಹಲವಾರು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿರುವುದು, ಬಹು ಪುರಾತನವಾಗಿರುವುಸು ಮತ್ತು ಒಮ್ಮೆಗೆ ಹಲವಾರು ಜನರನ್ನು ತಲುಪುವಂತಹದ್ದು ಮಾಧ್ಯಮಗಳಿಂದ. ಆ ಮಾಧ್ಯಮ ಆರಂಭವಾಗಿದ್ದು ಪತ್ರಿಕೆಗಳಿಂದ.

ಆದ್ದರಿಂದ ಪತ್ರಿಕೋದ್ಯಮವನ್ನು ಮಾಧ್ಯಮದ ಹಿರಿಯಣ್ಣನೆಂದು ಕರೆಯುತ್ತಾರೆ. ಇಂದಿಗೆ ೩೫೫ ವರ್ಷಗಳ ಹಿಂದೆ ಅಂದರೆ ೧೬೬೫ರಲ್ಲಿ ಇಂಗ್ಲೆಂಡಿನಲ್ಲಿ ಪ್ರಥಮ ಸುದ್ಧಿ ಪತ್ರ ಪ್ರಕಟಗೊಂಡು ಪತ್ರಿಕೋದ್ಯಮದ ಶ್ರೀಕಾರ ಬರೆದ ಸಂಗತಿ ಇತಿಹಾಸದಲ್ಲಿ ದಾಖಲಾಗಿದೆ. ಅಲ್ಲಿಂದ ಸರಿಯಾಗಿ ೨೫ ವರ್ಷಗಳ ನಂತರ ಅಂದರೆ ೧೬೯೦ರಲ್ಲಿ ಅಮೆರಿಕದಲ್ಲಿ ಪ್ರಥಮ ಸುದ್ಧಿ ಪತ್ರಿಕೆಯನ್ನು ಆರಂಭಿಸಲಾಯಿತು. ಫ್ರಾನ್ಸ್‌ನ ಪ್ರಥಮ ಸುದ್ಧಿ ಪತ್ರಿಕೆ ‘ಜರ್ನಲ್ ಡೆ ಪ್ಯಾರಿಸನ್ನು ೧೭೭೧ರಲ್ಲಿ ಆರಂಭಿಸಲಾಯಿತು. ಅದರಂತೆ ಭಾರತದಲ್ಲಿ ಪತ್ರಿಕೋದ್ಯಮದ ಆರಂಭ ೧೭೮೦ ಜನವರಿ ೨೯ರಲ್ಲಿ ಜೇಮ್ಸ್ ಅಗಸ್ಟಸ್ ಹಿಕ್ಕಿಯವರ ದಿ ಬೆಂಗಾಲ್ ಗೆಜೆಟ್ ಮೂಲಕ ಆಯಿತು. ಕಳೆದ ೨೪೦ ವರ್ಷಗಳಲ್ಲಿ ಪತ್ರಿಕೋದ್ಯಮ ಸಮಾಜದ ಹೆಮ್ಮೆಯ ಸಂಸ್ಥೆಯಾಗಿದೆ. ಜನಸಾಮಾನ್ಯರಿಗೆ ಮಾಹಿತಿಯನ್ನು ಒದಗಿಸುವ ಮುದ್ರಿತ ಸಾಧನವಾಗುವುದರೊಂದಿಗೆ ಅವರ ಸುಖ-ದುಃಖದಲ್ಲಿಯೂ ಪಾಲ್ಗೊಳ್ಳುವ ಸ್ನೇಹಿತನಂತಿದೆ ಎಂದರೂ ತಪ್ಪಾಗದು. ೧೭೮೦ರ ನವಂಬರ್‌ನಲ್ಲಿ ಇಂಡಿಯನ್ ಗೆಜೆಟ್ ಎನ್ನುವ ಪತ್ರಿಕೆ ಹೊರಬಂದರೆ ಆ ನಂತರ ಕಲ್ಕತ್ತಾ ಗೆಜೆಟ್, ದಿ ಬಂಗಾಳ ಜರ್ನಲ್‌ಗಳು ಭಾರತದ ಆರಂಭಿಕ ಪತ್ರಿಕೆಗಳಾಗಿ ಬೆಳಕು ಕಂಡವು. 

೧೯ನೇ ಶತಮಾನದ ಆರಂಭದಿಂದಲೂ ಭಾರತದಲ್ಲಿ ಪತ್ರಿಕೋದ್ಯಮ ತ್ವರಿತವಾಗಿ ಬೆಳೆಯಿತು. ಇದಕ್ಕೆ ಮೂಲ ಕಾರಣ ಸ್ವಾತಂತ್ರ್ಯ ಚಳುವಳಿ. ಹೆಸರಾಂತ ಸಮಾಜ ಸುಧಾರಕರಾದ ರಾಜಾರಾಮ ಮೋಹನರಾಯರು ಪತ್ರಿಕೆಯ ಅಪಾರ ಶಕ್ತಿಯನ್ನು ಅರಿತುಕೊಂಡು ೧೮೨೨ರಲ್ಲಿ ಬಂಗಾಳಿ ಭಾಷೆಯಲ್ಲಿ ಸಾಂಬಾದ್ ಕೌಮುಡಿ ಎಂಬ ಪತ್ರಿಕೆ ಆರಂಭಿಸಿದರು. ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿ ದೇಶಭಕ್ತಿ, ಸಂಘಟನೆಗಾಗಿ ಹಲವಾರು ನಾಯಕರು ಪತ್ರಿಕೆಗಳನ್ನು ಆರಂಭಿಸಿ ನೆರವನ್ನು ಪಡೆದುಕೊಂಡು ಸ್ವಾತಂತ್ರ್ಯ ಚಳುವಳಿಯ ಕಿಚ್ಚು ಆರದಂತೆ ನೋಡಿಕೊಂಡರು. ಅವುಗಳ ಪೈಕಿ ಬಾಲಗಂಗಾಧರ ತಿಲಕರು ಆರಂಭಿಸಿದ ಕೇಸರಿ, ಮಹಾತ್ಮಾಗಾಂದಿಯವರ ಯಂಗ್ ಇಂಡಿಯಾ, ಹರಿಜನ, ಲಾಲಾ ಲಜಪತ್ ರಾಯ್ ಅವರ ದಿ ಪೀಪಲ್ ಇತ್ಯಾದಿ ಪತ್ರಿಕೆಗಳನ್ನು ಹೆಸರಿಸ ಬಹುದು. ಮೊದಲು ಪತ್ರಿಕೆಗಳು ಏಕ ವ್ಯಕ್ತಿ ಸಂಸ್ಥೆಯಾಗಿರುತ್ತಿದ್ದವು. ಆದರೆ ೧೯೭೦ರ ಸುಮಾರಿಗೆ ಭಾರತೀಯ ಪತ್ರಿಕೆಗಳು ಉದ್ಯಮದ ಸ್ಥಾನಮಾನ ಪಡೆದುಕೊಂಡವು. ಅಲ್ಲಿಂದ ಈ ರಂಗದಲ್ಲಿ ಲಕ್ಷಗಟ್ಟಲೆ ಉದ್ಯೋಗಾವಕಾಶಗಳು ಸೃಷ್ಟಿಯಾದವು.  

 ವಿಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳು ಆಗುತ್ತಿದ್ದಂತೆ ಮಾಧ್ಯಮದ ಇತರ ಪಾಲುದಾರರಾದ ಆಕಾಶವಾಣಿ, ಇಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣಗಳು ಹುಟ್ಟಿಕೊಂಡವು. ಇವುಗಳೊಂದಿಗೆ ಸ್ಫರ್ಧೆಗಿಳಿಯಲೇ ಬೇಕಾದ ಅನಿವಾರ್‍ಯತೆ ಪತ್ರಿಕೆರಂಗಕ್ಕೆ ಬಂದಿತು. ಯಾಕೆಂದರೆ ಅದು ಪತ್ರಿಕೋದ್ಯಮದ ಅಳಿವು ಉಳಿವಿನ ಪ್ರಶ್ನೆಯಾಗಿತ್ತು. ಪತ್ರಿಕೆಗಳೂ ಸೇರಿ ಇಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣಗಳು ಆರಂಭದಿಂದಲೂ ಸಮಾಜದ ಕಾವಲಗಾರರ ಪಾತ್ರ ವಹಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸರಕಾರಗಳು ನಡೆಸಿದ ಹಲವಾರು ಅವ್ಯವಹಾರಗಳನ್ನು ಬಯಲಿಗೆಳೆದು, ಸರಕಾರಗಳ ತಪ್ಪು ನಡೆಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿ ಜನಪರ ಕಾರ್ಯಗಳನ್ನು ನಡೆಸುತ್ತಾ ಬಂದಿವೆ. ಆದರೂ ಮಾಧ್ಯಮಗಳಲ್ಲಿ ಈ ತನಕವೂ ಹೆಚ್ಚಿನ ವಿಶ್ವಾಸಾರ್ಹತೆ ಉಳಿಸಿಕೊಂಡಿರುವುದು ಪತ್ರಿಕೆಗಳೇ ಅನ್ನುವುದರಲ್ಲಿ ಎರಡು ಮಾತಿಲ್ಲ. 

ಇತ್ತೀಚಿನ ದಿನಗಳಲ್ಲಿನ ಕೆಲವು ಘಟನೆಗಳನ್ನು ವೀಕ್ಷಿಸಿದಾಗ ರಾಜಕಾರಣಿ, ಪ್ರಭಾವಿಗಳಿಗಷ್ಟೆ ಮಣೆಹಾಕಿ ಕೆಲವು ಪತ್ರಿಕೆಗಳು ಸಾಮಾನ್ಯರನ್ನು ನಿರ್ಲಕ್ಷಿಸಿ ಪಕ್ಷಪಾತಿಯಂತೆ ವರ್ತಿಸುತ್ತವೆಯೇನೋ ಅನ್ನಿಸುತ್ತದೆ. ಹೀಗೆಂದು ಹಲವಾರು ಜನ ಆರೋಪವನ್ನೂ ಮಾಡುತ್ತಾರೆ. ಪೀತಪತ್ರಿಕೋದ್ಯಮ ನಡೆಸುವವರೂ ಇದ್ದಾರೆ. ಇದು ಪತ್ರಿಕೋದ್ಯಮಕ್ಕೆ ಕಪ್ಪುಚುಕ್ಕೆ ಅನ್ನುವುದು ನಿಜವಾದರೂ ಪತ್ರಿಕೋದ್ಯಮದಲ್ಲಿರುವ ಸರ್ವರೂ ಉಳ್ಳವರ ಪಕ್ಷಪಾತಿಗಳಲ್ಲ ಅನ್ನುವುದನ್ನು ಮರೆಯಬಾರದು. ಸೇವಾ ಮನೋಭಾವನೆ, ಸಾಮಾಜಿಕ ಕಳಕಳಿ, ನಿಸ್ವಾರ್ಥ ಬುದ್ಧಿ, ದೇಶಪ್ರೇಮ ಬಹಳಷ್ಟು ಪತ್ರಕರ್ತರೂ ಸೇರಿ ಮಾಧ್ಯಮ ಮಿತ್ರರಲ್ಲಿ ಇನ್ನೂ ಉಳಿದಿದೆ. ಇದು ಸಮಾಧಾನಕರ ವಿಷಯ. ಮುಂದೆಯೂ ಮಾಧ್ಯಮದ ಹಿರಿಯಣ್ಣನಾದ ಪತ್ರಿಕೋದ್ಯಮಿಗಳು ತಮ್ಮ ಅತ್ಯುಚ್ಛವಾದ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕೊಂಡು ಪಕ್ಷಾಪಾತಿಯಾಗದಿರಲಿ ಎಂದು ಆಶಿಸೋಣ. 


1 likes

Published By

Deepak Shenoy

deepakshenoy

Comments

Appreciate the author by telling what you feel about the post 💓

Please Login or Create a free account to comment.