ದಾರಿ ಬಿಡೋಣ!

ಹಿಂದಿನವರಿಗೆ ಮುಂದೆ ಬರಲು ಮುಂದೆ ಇದ್ದವರು ದಾರಿ ಮಾಡಿಕೊಡಬೇಕು. ಹಳೆಯ ನೀರು ಹೋಗುತ್ತಿರ ಬೇಕು, ಹೊಸ ನೀರು ಬರುತ್ತಿರ ಬೇಕು. ಅದೇ ಪ್ರಕೃತಿಯ ಜೀವಂತಿಕೆ.

Originally published in kn
Reactions 1
448
Argodu Suresh Shenoy
Argodu Suresh Shenoy 18 May, 2021 | 1 min read

ಅದೊಂದು ಹೆಸರಾಂತ ಶಿಕ್ಷಣ ಸಂಸ್ಥೆಯ ಖಾಸಗಿ ಕಾಲೇಜು. ಅಲ್ಲಿ ಗಿರೀಶ ಎಂಬ ಹೆಸರಿನ ಹಿರಿಯ ಶಿಕ್ಷಕರೊಬ್ಬರು ಅಂದು ನಿವೃತ್ತರಾಗುವರಿದ್ದರು. ನಲವತ್ತೊಂದು ವರ್ಷಗಳಷ್ಟು ಸುದೀರ್ಘ ಕಾಲ ಆ ಕಾಲೇಜಿನಲ್ಲಿ ಅವರು ಸಹಸ್ರಾರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳಾಗಿ ಸೇವೆ ಸಲ್ಲಿಸಿದ್ದರು. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಅವರಿಗೆ ಸ್ಮರಣೀಯ ವಿದಾಯ ಹೇಳಬೇಕೆಂಬ ತುಡಿತದಲ್ಲಿ ಶಾಸಕರನ್ನೇ ಕಾಡಿ ಬೇಡಿ ಆ ಹಿರಿಯ ಶಿಕ್ಷಕರ ವಿದಾಯ ಸಮಾರಂಭಕ್ಕೆ ಮುಖ್ಯ ಅತಿಥಿಗಳನ್ನಾಗಿ ಆಮಂತ್ರಿಸಿದ್ದರು. ನಿವೃತ್ತಲಾಗಲಿರುವ ಶಿಕ್ಷಕರಿಗೆ ಸ್ಮರಣೀಯ ಉಡುಗೊರೆ ನೀಡಬೇಕೆಂದು ಅವರಲ್ಲಿ ವಿದ್ಯೆ ಕಲಿತ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ಅವರಿಗೆ ನಲವತ್ತೊಂದು ಗ್ರಾಮ್‌ಗಳ ಚಿನ್ನದ ಸರವನ್ನು ಮಾಡಿಸಿದ್ದರು. ಈ ಸಮಾರಂಭದಲ್ಲಿ ಅದನ್ನು ಅವರಿಗೆ ಅರ್ಪಿಸುವವರಿದ್ದರು. ಅವರಿಗೆ ತಾವು ಕಡಿಮೆಯಾಗಬಾರದೆಂದು ಶಾಲಾ ಆಡಳಿತ ಮಂಡಳಿಯವರು ಅವರ ನಿವೃತ್ತಿ ಜೀವನಕ್ಕಾಗಿ ಐದು ಲಕ್ಷ ರೂಪಾಯಿಗಳ ಹಮ್ಮಣಿ ಸಮರ್ಪಿಸುವವರಿದ್ದರು. ಇಷ್ಟೆಲ್ಲ ತಯಾರಿಗಳಾಗಿದ್ದರು ಕಾಲೇಜಿನ ಪ್ರಾಂಶುಪಾಲರು ಯಾಕೋ ವ್ಯಾಕುಲರಾದಂತೆ ಕಂಡು ಬರುತ್ತಿದ್ದರು. ಇದನ್ನು ನೋಡಿದ ಆ ಹಿರಿಯ ಗುರುಗಳಿಗೆ ಪ್ರಿನ್ಸಿಪಾಲರು ವ್ಯಾಕುಲರಾಗಲು ಕಾರಣವೆನೆಂದು ಗೊತ್ತಿತ್ತು. ಯಾವುದೇ ವ್ಯವಹಾರ ಜ್ಞಾನವಿಲ್ಲದೇ ಕೇವಲ ಎಮ್.ಎ. ಡಾಕ್ಟರೇಟ್ ಮಾಡಿ ಆ ಕಾಲೀಜಿಗೆ ಪ್ರಾಂಶುಪಾಲರಾಗಿ ಬಂದ ಅವರಿಗೆ ಈ ಹಿರಿಯ ಗುರುಗಳೇ ಹಿರಿಯಣ್ಣನಂತೆ ತಿದ್ದಿ-ತೀಡಿ, ಮಾರ್ಗದರ್ಶನ ನೀಡಿ ಬೆಳೆಸಿದ್ದರು. ಇಂದು ಆ ಕಾಲೇಜು ಜಿಲ್ಲೆಯ ಅತ್ಯುತ್ತಮ ಐದು ಕಾಲೇಜುಗಳಲ್ಲಿ‌ಒಂದು ಎನಿಸಿಕೊಳ್ಳಲು ಪ್ರಿನ್ಸಿಪಾಲರಿಗಿಂತ ಹೆಚ್ಚಾಗಿ ಆ ಹಿರಿಯ ಶಿಕ್ಷಕ ಗಿರೀಶರ ಶ್ರಮವೇ ಕಾರಣವಾಗಿತ್ತು. ಈಗ ಗಿರೀಶರು ನಿವೃತ್ತರಾದರೆ ಮುಂದೆ ತನಗೆ ಮಾರ್ಗದರ್ಶನ ನೀಡುವವರಾರು, ತಮ್ಮ ಕಾಲೇಜಿನ ಗತಿ ಏನಾಗಿ ಬಿಡುತ್ತದೋ ಎನ್ನುವ ಭಯ ಆ ಪ್ರಿನ್ಸಿಪಾಲರಿಗಿತ್ತು. ಅದನ್ನು ಹಲವಾರು ಸಲ ಆ ಹಿರಿಯ ಶಿಕ್ಷಕರ ಮುಂದೆ ಪ್ರಿನ್ಸಿಪಾಲರು ಅಲವತ್ತು ಕೊಂಡಿದ್ದು ಇತ್ತು. 

ಶಾಸಕರು ಆಗಮಸಿ ಕೂಡಲೇ ಸಭಾಕಾರ್ಯಕ್ರಮ ಆರಂಭವಾಯಿತು. ಪ್ರಾಂಶುಪಾಲರದ್ದೆ ಸ್ವಾಗತ ಭಾಷಣ. ಆದರೆ ಭಾಷಣದ ಮಧ್ಯೆ ಅವರು ಅದೆಷ್ಟೋ ಸಲ ಬಿಕ್ಕಿದ್ದರು. ತಾವು ಕಾಲೀಜಿಗೆ ಪ್ರಾಂಶುಪಾಲರಾದರೆ ನನಗೆ ಇವರೇ ಪ್ರಾಂಶುಪಾಲರು ಎಂದು ಪ್ರಾಂಜಲ ಮನಸ್ಸಿನಿಂದ ಹೇಳಿಕೊಂಡರು. ಅವರ ಮಾತುಗಳನ್ನು ಕೇಳಿ ಅಲ್ಲಿ ಕುಳಿತಿದ್ದ ವಿದ್ಯಾರ್ಥಿಗಳ ಮನಸ್ಸು ಸಹ ಬಾರವಾಯಿತು. ನಂತರ ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಗುರುಗುಣಗಾನ ಜರುಗಿ, ನಿವೃತ್ತರಾಗಿಲಿರುವ ಹಿರಿಯ ಗುರುಗಳಾದ ಗಿರೀಶರಿಗೆ ಮತ್ತು ಅವರ ಪತ್ನಿಗೂ ಸಹ ಉಡುಗೊರೆ, ನೆನಪಿನ ಕಾಣಿಕೆ ನೀಡಿ; ಮಾಲೆಗಳನ್ನು ಸಮರ್ಪಿಲಾಯಿತು. ವಿದಾಯ ಸಮಾರಂಭ ಮುಗಿಯಿತು. ಹಿರಿಯ ಗುರು ದಂಪತಿಗಳನ್ನು ಅವರ ಮನೆಗೆ ತಲುಪಿಸಲು ಪ್ರಾಂಶುಪಾಲರು ತಾವೇ ಸ್ವತಃ ತಮ್ಮ ಕಾರನ್ನು ತಂದು ಅದರಲ್ಲಿ ಅವರನ್ನು ಕುಳ್ಳಿರಿಸಿ ಕೊಂಡು ಹೊರಡುತ್ತಾರೆ. ಅವರ ಚಿಂತಾಕ್ರಾಂತ ಮುಖ ಇನ್ನೂ ಹಾಗೆಯೇ ಇರುತ್ತದೆ. 

ಕಾರು ಸ್ವಲ್ಪ ದೂರ ಹೋಗುವುದರೊಳಗೆ ಹಿರಿಯ ಗುರುಗಳು ಕಾರು ನಿಲ್ಲಿಸುವಂತೆ ಪ್ರಾಂಶುಪಾಲರಿಗೆ ಹೇಳಿದರು. ಇಬ್ಬರೂ ಕಾರಿನಿಂದ ಕೆಳಗಿಳಿದರು. ಹತ್ತಿರದಲ್ಲಿಯೇ ಒಂದು ಅಶ್ವಥ್ಥದ ಮರವಿತ್ತು. ಹಿರಿಯ ಶಿಕ್ಷಕರು ಪ್ರಾಂಶುಪಾಲರನ್ನು ಅದರ ಹತ್ತಿರ ಕರೆದುಕೊಂಡು ಹೋದರು ಹಾಗೂ ಕೈಗೆ ನಿಲುಕುವಂತುರುವ ಒಂದು ಒಣಗಿ ಬೀಳಲು ತಯಾರಾಗಿರುವ ಒಂದು ಎಲೆಯನ್ನು ಕೀಳುವಂತೆ ಹೇಳಿದರು. ಪ್ರಾಂಶುಪಾಲರು ಅದರಂತೆ ಮಾಡಿ ಒಣಗಿದ ಎಲೆಯನ್ನು ಹಿರಿಯ ಶಿಕ್ಷಕರಿಗೆ ಕೊಡಲು ಬಂದರು. ಅದನ್ನು ತೆಗೆದುಕೊಂಡು ಕೆಳಗೆ ಒಗೆದ ಹಿರಿಯ ಶಿಕ್ಷಕರು ಎಲೆ ಕಿತ್ತ ಜಾಗಯಲ್ಲಿ ಏನಿದೆ ನೋಡಿ ಎಂದು ಪ್ರಾಂಶುಪಾಲರಿಗೆ ಹೇಳಿದರು. ಅಲ್ಲಿ ನೋಡಿ ಮತ್ತೊಂದು ಎಲೆಯ ಚಿಗುರಿದೆ ಎಂದು ಪ್ರಾಂಶುಪಾಲರು ಅಂದರು.

ಆಗ ಹಿರಿಯ ಶಿಕ್ಷಕರು ಅಂದರು “ನೋಡಿ ನಾವು ಹಗಲಿನಲ್ಲಿ ದುಡಿದರೆ ರಾತ್ರಿ ನಿದ್ರಿಸುತ್ತೇವೆ. ಆದರೆ ಈ ಅಶ್ವಥ್ಥ ಮರದ ಎಲೆ ಹಾಗಲ್ಲ ಹಗಲು ರಾತ್ರಿ ಅನ್ನದೇ ಅವಿಶ್ರಾಂತವಾಗಿ ಆಮ್ಲಜನಕವನ್ನು ಗಾಳಿಗೆ ಬಿಡುತ್ತಲೇ ಇರುತ್ತದೆ. ಆದರೂ ಇದು ಹೊಸ ಚಿಗುರಿಗೆ ದಾರಿ ಮಾಡಿ ಕೊಡಲು ತಾನು ಒಣಗಿ ಮರದಿಂದ ಕಳಚಿಕೊಳ್ಳುತ್ತದೆ. ಇದು ಪ್ರಕೃತಿ ನಿಯಮ. ಯಾರೂ ಇಲ್ಲಿ ಶಾಶ್ವತರಲ್ಲ. ಮುಂದಿನವರಿಗಾಗಿ ನಾವು ಜಾಗ ಖಾಲಿ ಮಾಡಲೇ ಬೇಕು. ಇಂದು ನಾನು ನಾಳೆಗೆ ನೀವು! 

“ನಾನು ಇನ್ನೂ ಹತ್ತಾರು ವರ್ಷ ಶಿಕ್ಷಕನಾಗಿ ಮುಂದುವರಿದರೆ ಒಬ್ಬ ಪ್ರತಿಭಾವಂತ ಯುವಶಿಕ್ಷಕನ ಅವಕಾಶವನ್ನು ಕಸಿದುಕೊಂಡು ಆತನಿಗೆ ಅನ್ಯಾಯ ಮಾಡಿದಂತೆ ಆಗುವುದಿಲ್ಲವೇ? ಪ್ರಕೃತಿ ಇದನ್ನು ಸಹಿಸುವುದಿಲ್ಲ. ಆದ್ದರಿಂದ ನೀವು ವ್ಯಾಕುಲರಾಗುವುದು ಅನಗತ್ಯ ಅಂದಾಗ ಅದರಲ್ಲಿರುವ ಸತ್ಯವನ್ನು ಕಂಡುಕೊಂಡ ಪ್ರಾಂಶುಪಾಲರು ಹಿರಿಯ ಗುರುಗಳ ಪಾದಮುಟ್ಟಿ ನಮಸ್ಕರಿಸಿದರಂತೆ.

ಈ ಲಾಜಿಕ್ ಅನ್ನು ಪ್ರತಿಯೊಬ್ಬರೂ ಅರಿತು ಕೊಳ್ಳುವ ಅಗತ್ಯವಿದೆ. ಅಣೆಕಟ್ಟಿನಲ್ಲಿ ತುಂಬಿರುವ ಹಳೆಯ ನೀರು ಕಾಲಿಯಾದಾಗ ಮಾತ್ರ ಹೊಸ ನೀರು ಬರಲು ಸಾಧ್ಯವಾಗುವುದಲ್ಲವೇ? ರೈಲ್ವೆ ಸ್ಟೇಶನ್‌ನ ಪ್ಲಾಟ್‌ಫಾರ್ಮನಲ್ಲಿ ನಿಂತ ಮೊದಲ ರೈಲು ಹೊರಟುಹೊಂದ ನಂತರ ಮಾತ್ರವೇ ಮತ್ತೊಂದು ರೈಲಿಗೆ ಅಲ್ಲಿಗೆ ಬರಲು ಸಾಧ್ಯ. ಇಲ್ಲದಿದ್ದರೆ ಘರ್ಷಣೆ, ಅಪಘಾತಗಳು ಸಂಭವಿಸುತ್ತವೆ. ಹಿಂದಿನವರಿಗೆ ಮುಂದೆ ಬರಲು ಮುಂದೆ ಇದ್ದವರು ದಾರಿ ಮಾಡಿಕೊಡಬೇಕು. ಹಳೆಯ ನೀರು ಹೋಗುತ್ತಿರ ಬೇಕು, ಹೊಸ ನೀರು ಬರುತ್ತಿರ ಬೇಕು. ಅದೇ ಪ್ರಕೃತಿಯ ಜೀವಂತಿಕೆ. ಮನುಷ್ಯರಿಗೂ ಅನ್ವಯಿಸುತ್ತದೆ. ಆದ್ದರಿಂದ ಯಾವುದೇ ವಿಷಯಕ್ಕೆ ದುಃಖಿಸುವ ಮೊದಲು ಈ ವಿಷಯದವನ್ನು ವಿವೇಚಿಸುವುದು ಒಳ್ಳೆಯದು. 

 

1 likes

Published By

Argodu Suresh Shenoy

argodusureshshenoy

Comments

Appreciate the author by telling what you feel about the post 💓

Please Login or Create a free account to comment.