ಸುಖಕ್ಕೆ ಸಂಪತ್ತಿನ 'ಮಿಕ' ಬೇಕೆ?

ದುಃಖವನ್ನೇ ನೆನೆಯುತ್ತಾ ಇದ್ದರೆ ಸುಖ ಪಡುವುದಾದರೂ ಹೇಗೆ? ಸುಖವನ್ನು ಪಡುವುದು ಹೇಗೆ?

Originally published in kn
Reactions 0
440
Argodu Suresh Shenoy
Argodu Suresh Shenoy 27 Aug, 2020 | 1 min read

ಮನುಷ್ಯನ ಜೀವನ ಎನ್ನುವುದು ನೀರಿನ ಬುಗ್ಗೆಯಿಂದ ಹೊರಬಿದ್ದ ನೀರಿನಂತೆ. ಬುಗ್ಗೆಯಿಂದ ಹೊರಬೀಳುವಾಗ ಕಿರು ಬೆರಳು ಅಥವಾ ಅದಕ್ಕಿಂತ ಸಣ್ಣ ಗಾತ್ರದಲ್ಲಿರುವ ನೀರಿನ ಹರಿವು ಮುಂದುವರಿದಂತೆ ಬೇರೆ ಬೇರೆ ಜರಿ ತೊರೆಗಳ ನೀರಿನೊಂದಿಗೆ ಬೆರೆತು ಹಳ್ಳವಾಗುತ್ತದೆ. ಹಲವಾರು ಹಳ್ಳಗಳು ಸಂಗಮಗೊಂಡು ನದಿಯಾಗಿ ಪರಿವರ್ತನೆಗೊಳ್ಳುತ್ತದೆ. ನದಿಯ ನೀರು ಪರ್ವತದಿಂದ ಬಯಲು ಪ್ರದೇಶಕ್ಕೆ ದುಮುಕಿ, ಕಲ್ಲು-ಮುಳ್ಳುಗಳೊಂದಿಗೆ ಗುದ್ದಾಡಿ; ಒದ್ದಾಡಿದರೂ ಸಹಸ್ರಾರು ಜನರ, ಜಾನುವಾರುಗಳ, ಗಿಡಮರಗಳ ಹಸಿವನ್ನು ನೀಗಿಸಿ ಸಮುದ್ರದೊಂದಿಗೆ ಸೇರಿ ಒಂದಾಗ ಬಹುದು ಅಥವಾ ಆಣೆಕಟ್ಟುಗಳಲ್ಲಿ ಸಂಗ್ರಹವಾಗಿ ಮತ್ತಷ್ಟು ಜನೋಪಯೋಗಿ ಕೆಲಸಗಳಿಗೆ ಬಳಸ್ಪಡಬಹುದು. ಒಟ್ಟಾರೆ ಕೂಡು; ಕಳೆಯ ಲೆಕ್ಕಾಚಾರದಲ್ಲಿಯೇ ಬರುವ ನೀರಿನ ಹರಿವು ಅಂತಿಮವಾಗಿ ಸಮುದ್ರಕ್ಕೆ ಸೇರಿ ನಾಮಾವಶೇಷವಾದರೂ ತಾನು ಸೋತೆನೆಂದು ಕುಗ್ಗುವುದಿಲ್ಲ. ಅಣೆಕಟ್ಟಿನಲ್ಲಿಯೇ ಮಡುಗಟ್ಟಿ ನಿಂತಿದ್ದರೂ ಗೆದ್ದೆನೆಂದು ಹಿಗ್ಗುವುದಿಲ್ಲ. ಹೇಗಾದರೂ ಅದರ ಜೀವನ ಸಾರ್ಥಕತೆಗೊಂಡಿರುವುದಂತು ಸತ್ಯ.

ನೀರಿನ ತೊರೆಯಂತೆ ಮನುಷ್ಯರು ಒಂಟಿಯಾಗಿ ಬರುವರು, ಸಂಸಾರಿಗಳಾಗಿ, ಮಕ್ಕಳು, ಮರಿಗಳನ್ನು ಹೊಂದಿ ನದಿಗಳಾಗುತ್ತೇವೆ. ವ್ಯಾಪಾರ, ಉದ್ದಿಮೆ, ನೌಕರಿಗಳನ್ನು ಮಾಡಿ ದುಡ್ಡನ್ನೂ ಸಂಪಾದಿಸುತ್ತೇವೆ. ಸುಖವನ್ನು ಕಟ್ಟಿಹಾಕಿ ನಿರಂತರವಾಗಿ ಹಿಡಿದುಟ್ಟು ಕೊಳ್ಳಲೇ ಬೇಕೆಂದು ಅವಿಶ್ರಾಂತವಾಗಿ ದುಡಿಮೆಗಿಳಿಯುತ್ತೇವೆ. ವಿಶಾಲತೆಯ ಕೊರತೆಯಿಂದ ಅಲ್ಲಿಯೂ ಚಿಂತೆ, ಒತ್ತಡ, ಭಯಕ್ಕೆ ಸಿಲುಕಿ ನಲುಗಿ ಹೋಗುತ್ತೇವೆ. ಅಲ್ಲಿಯ ತನಕ ನದಿಯಂತೆ ಇರುವ ನಾವು ಮುಂದೆ ನದಿ ಅವಶ್ಯವಿರುವವರಿಗೆಲ್ಲ ಸುಲಭವಾಗಿ ದೊರಕುವಂತೆ ಇರುವುದಿಲ್ಲ. ನಮ್ಮಲ್ಲಿ ಅಹಂಕಾರ, ಗರ್ವ, ಪ್ರತಿಷ್ಟೆಗಳು ಬಂದು ಸೇರಿ ಕೊಂಡು ಬಿಡುತ್ತವೆ. ತನಗಿಂತ ಬಡವರನ್ನು ಅನಾದಾರದಿಂದ ಕಾಣುತ್ತೇವೆ. ಆಗ ನಮಗೆ ಅರಿವಾಗುವುದಿಲ್ಲ ನಮ್ಮ ತೃಪ್ತಿ, ಅನಂದವನ್ನು ಈ ಸಿರಿವಂತಿಕೆಯ ಗರ್ವವೇ ಕಸಿದುಕೊಳ್ಳುತ್ತಿದೆ ಎಂಬ ನಿಜ ಸಂಗತಿ! ಜೀವನ ಸಾರ್ಥಕತೆಯ ಮಾತಂತೂ ದೂರವೇ ಉಳಿಯಿತು!! ಗರ್ವ, ಅಹಂಕಾರ, ಮದ, ಮೋಹ ಇತ್ಯಾದಿ ದುರ್ಗುಣಗಳು ತುಂಬಿ ನಮ್ಮೊಳಗಿನ ಸ್ಥಳ ಭರ್ತಿಯಾಗಿರುತ್ತದೆ. ಆದ್ದರಿಂದ ನಾವು ಸುಖ, ಸಂತೋಷವನ್ನು ಹೊರ ಜಗತ್ತಿನಲ್ಲಿ ಹುಡುಕಲಾರಂಭಿಸುತ್ತೇವೆ. 

ಮನುಷ್ಯನ ಜೀವನದ ಕಷ್ಟ, ಸಂಕಷ್ಟಗಳ ಸರಮಾಲೆಯ ಮಧ್ಯ ಸುಖವೆನ್ನುವುದು ಊಟದಲ್ಲಿ ಬಡಿಸುವ ಉಪ್ಪಿನಕಾಯಿಯಷ್ಟು ಅಲ್ಪ ಪ್ರಮಾಣದಲ್ಲಿಯೇ ಇರುತ್ತದೆ. ನಾವು ಆ ಅಲ್ಪ ಸುಖವನ್ನು ಕೈವಶ ಮಾಡಿಕೊಳ್ಳ ಬೇಕೆಂದು ಹಲವಾರು ರೀತಿಯ ಸರ್ಕಸ್‌ಗಳನ್ನು ಮಾಡುತ್ತೇವೆ. ಸ್ವಂತ ಮನೆ ಇದ್ದರೆ ಸುಖ ಎಂದು ಮನೆ ಕಟ್ಟಿಸಿ ಕೊಳ್ಳುತ್ತೇವೆ, ಮನೆಯೊಳಗೆ ಕಂಡ ಕಂಡ ಭೋಗ ವಸ್ತುಗಳನ್ನು ತಂದಿರಿಸಿಕೊಳ್ಳುತ್ತೇವೆ. ಸ್ವಂತ ವಾಹನವಿದ್ದರೆ ಸುಖವೆಂದು ಅದನ್ನೂ ಕೊಳ್ಳುತ್ತೇವೆ, ಹಣ, ಸಂಪತ್ತು, ಆಸ್ತಿ ಕೂಡಿಟ್ಟರೆ ಸುಖವೆಂದು ಹಗಲು-ರಾತ್ರಿ ದುಡಿದು ಅದನ್ನೂ ಕೂಡಿಟ್ಟುಕೊಂಡು ಬಿಡುತ್ತೇವೆ. ಮೊದಲು ಹಣ ಕೂಡಿಡುವುದು ಸುಖಕ್ಕಾಗಿ ಎಂದು ಆರಂಭಿಸಿದರೂ ಮುಂದೆ ಅದೂ ಅಭ್ಯಾಸವಾಗಿ ತಲೆ ತಲೆಮಾರುಗಳಿಗೆ ಬೇಕಾಗುವಷ್ಟು ಹಣ ಕೂಡಿಟ್ಟರೂ ನಮಗೆ ತೃಪ್ತಿಯಾಗುವುದಿಲ್ಲ. ಯಾಕೆಂದರೆ ಸುಖ ಯಾವುದರಿಂದ ಬರಬಲ್ಲದು ಎಂಬ ಸತ್ಯ ನಮಗಾರಿಗೂ ಗೊತ್ತಿಲ್ಲ. ದುಡ್ಡು, ಸಂಪತ್ತು, ಕೀರ್ತಿ ಸಂಪಾದಿಸಿದವನೇ ಸುಖಿ, ಪ್ರತಿಷ್ಟಿತ ಎಂದು ನಾವೆಲ್ಲ ಗಟ್ಟಿಯಾಗಿ ನಂಬಿದ್ದೇವೆ. ಅದನ್ನು ಸಂಪಾದಿಸುವ ಸಲುವಾಗಿ ಬಹಳಷ್ಟು ಅಡ್ಡ ಮಾರ್ಗಗಳನ್ನೂ ಸಹ ಹಿಡಿದು ಬಿಡುತ್ತೇವೆ. ಕೊಲೆ, ಸುಲಿಗೆಗಳನ್ನೂ ಮಾಡುತ್ತೇವೆ. ಧರ್ಮ, ಜಾತಿಗಳ ಅಮಲುಗಳನ್ನು ಮನದೊಳಗೆ ತುಂಬಿಕೊಂಡು ಜೀವನವನ್ನು ದುಃಖದ ಚಿತ್ರಾನ್ನ ಮಾಡಿಕೊಳ್ಳುತ್ತೇವೆ ವಿನಃ ಸುಖವನ್ನಂತೂ ಪಡೆಯಲಾರೆವು. 

ಹಾಗಾದರೆ ಸುಖವು ಇರುವುದಾದರೂ ಎಲ್ಲಿ? ಅದರ ಜಾಡನ್ನು ನಾವು ಹುಲು ಮಾನವರು ಹಿಡಿಯುವುದಾದರೂ ಹೇಗೆ? ಸುಖ, ದುಃಖಗಳೆರಡು ನಮ್ಮ ಮನಸ್ಸಿನ ಬಾವನೆಗಳು ಅಥವಾ ಸ್ಥಿತಿ ಎಂದು ಹಲವಾರು ದಾರ್ಶನಿಕರ ಅಂಬೋಣ. ಅಂದ ಮೇಲೆ ಸುಖ ನಮ್ಮೊಳಗೆ ಇದೆ ಎಂದಾಯಿತು. ಮನೆಯೊಳಗೆ ಚಿನ್ನದ ಗಟ್ಟಿ ಇಟ್ಟುಕೊಂಡು ದುಡ್ಡಿಲ್ಲ ಎಂದು ವ್ಯಥೆ ಪಡುವವರಂತೆ ಮನದೊಳಗಿನ ಸುಖವನ್ನು ಕಂಡುಕೊಳ್ಳದೇ ಸುಖಕ್ಕಾಗಿ ಹಪಹಪಿಸುತ್ತಲೇ ಇರುತ್ತವೆ. ನನಗೆ ಸುಖವೆನಿಸಿದ್ದು ಮತ್ತೊಬ್ಬನಿಗೂ ಸುಖವೆನಿಸ ಬೇಕಾಗಿಲ್ಲ ಅವನ ದುಃಖ ನನಗೆ ದುಃಖವೆನಿಸ ಬೇಕಾಗಿಲ್ಲ. ಅಂದರೆ ಸುಖ-ದುಃಖಗಳ ತೀವ್ರತೆ ಮನುಷ್ಯನಿಂದ ಮನುಷ್ಯನಿಗೆ ಬದಲಾಗುತ್ತದೆ ಎಂದ ಹಾಗಾಯಿತು. 

ಸುಖ ಮತ್ತು ದುಃಖ ಇವೆರಡು ನಮ್ಮೊಳಗಿನ ಭಾವನೆಗಳು ಎಂದ ಮೇಲೆ ಮನದ ಆ ಭಾವನೆಗಳನ್ನು ಉದ್ದೀಪನಗೊಳಿಸಿ ಕೊಳ್ಳ ಬೇಕಾದವರು ನಾವೇ ಆಲ್ಲವೇ? ದುಃಖದಲ್ಲಿಯೂ ಸುಖವನ್ನು ಹುಡುಕುವುದೇ ನಿಜವಾದ ಸುಖವನ್ನು ಪಡೆಯುವ ಮರ್ಮ. ಅದು ಹೇಗೆಂದರೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬಿದ್ದು ಕಾಲಿಗೊಂದು ಸಣ್ಣ ಗಾಯವಾಯಿತು ಎಂದಿಟ್ಟುಕೊಳ್ಳಿ. ಆ ಬಗ್ಗೆ ಯೋಚಿಸಿ ಮನಸ್ಸಿನಲ್ಲಿಯೇ ದುಃಖ ಪಡುವುದಕ್ಕಿಂತ ದೊಡ್ಡ ಪೆಟ್ಟಾಗಿ ಮೂಳೆ ಮುರಿದಿಲ್ಲವಲ್ಲ ಪುಣ್ಯಕ್ಕೆ ಎಂದು ಕೊಳ್ಳಿ. ಅದೇ ಸುಖ. ಕರೋನಾ ಕಾರಣದಿಮದ ತಿಂಗಳುಗಟ್ಟಲೆ ಲಾಕ್‌ಡೌನ್ ಆಯಿತು. ಅಂಗಡಿ ಮುಂಗಟ್ಟುಗಳು ಮುಚ್ಚಿ ನಷ್ಟವಾಯಿತು ಎಂದು ಹಳಹಳಿಸುವ ಬದಲು ಆ ಸಂದರ್ಭದಲ್ಲಿ ಮನೆಯಲ್ಲಿಯೇ ಕುಟುಂಬದೊಂದಿಗೆ ಹಾಯಾಗಿರಲು ಸಾಧ್ಯವಾಯಿತಲ್ಲ, ವೇಳೆಗೆ ಸರಿಯಾಗಿ ಉಂಡು, ಮಡದಿ, ಮಕ್ಕಳೊಂದಿಗೆ ಮನಬಿಚ್ಚಿ ಮಾತನಾಡಲು ಬಿಡುವು ಸಿಕ್ಕಿತಲ್ಲ, ಮನೆಯೂಟವನ್ನೇ ಉಣ್ಣುವಂತಾಯಿತಲ್ಲ ಎಂದು ಆನಂದ ಪಟ್ಟರೆ ಅದೇ ಸುಖವಲ್ಲವೇ? ಯಾವುದೇ ದುಃಖವಿರಲಿ. ನಿರಂತರವಾಗಿ ಅದನ್ನೇ ಧ್ಯಾನಿಸುತ್ತಾ ಕುಳಿತಿದ್ದರೆ ಅದರ ತೀವ್ರತೆ ಹೆಚ್ಚಾಗುತ್ತಾ ಹೋಗುತ್ತದೆ. ಚಳಿಕಾಯಿಸಲೆಂದು ಹಾಕಿಕೊಂಡ ಬೆಂಕಿಗೆ ಒಣ ಕಟ್ಟಿಗೆಗಳನ್ನು ಹಾಕುತ್ತಾ ಹೋದಹಾಗೆ ಬೆಂಕಿ ತೀವ್ರತೆ ಅಧಿಕವಾಗಿ ನಾವು ಹಿಂದೆಹಿಂದಕ್ಕೆ ಸರಿಯ ಬೇಕಾಗುವುದಿಲ್ಲವೇ? ಆ ಬೆಂಕಿಯ ಉರಿಯನ್ನು ಚಳಿಯ ತೀವ್ರತೆ ಕಮ್ಮಿಯಾದಂತೆ ಕಮ್ಮಿಗೊಳಿಸುತ್ತಾ ಬಂದರೆ ಮೈಗೆ ಹಿತವಾಗುವುದಿಲ್ಲವೇ? ದುಃಖದಲ್ಲಿಯೂ ಇಂತಹ ಸುಖಾನುಭವ ಪಡೆಯುವ ನೂರಾರು ಉದಾಹರಣೆಗಳನ್ನು ಕೊಡಬಹುದು. ಅಂಥಹ ಹಿತಾನುಭವ ದುಃಖದಲ್ಲಿ ಸುಖದ ಜಾಡನ್ನು ಕಾಣುವವನಿಗೆ ಸಿಗುತ್ತದೆ. ಇಂದು ದುಃಖವಿನಿಸಿದ್ದು ನಾಲ್ಕಾರು ದಿವಸಗಳ ನಂತರ ಅಥವಾ ಮತ್ತೊಂದು ಆನಂದ ಬಂದಾಗ ಮರತೇ ಹೋಗಿರುತ್ತದೆ. ಬೇಕಾದರೆ ಗಮನಿಸಿ ನೋಡಿ. ಹಾಗಿರುವಾಗ ಇಷ್ಟೊಂದು ಕ್ಷಣಿಕವಾದ ದುಃಖಕ್ಕೆ ಯಾಕೆ ನೊಂದು ಬೇಯಬೇಕು? ಬೆಂದು ನೋಯಬೇಕು? ಯಾಕೆ ಸಾಯಬೇಕು?

ದುಡ್ಡನ್ನು, ಸಂಪತ್ತನ್ನು ಇತರರೊಂದಿಗೆ ಹಂಚಿ ನಮ್ಮ ಸುಖದ ಸ್ವಾದವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳ ಬಹುದು. ಹೇಗೆ ಅನ್ನುವುದನ್ನು ಮತ್ತೊಮ್ಮೆ ಚರ್ಚಿಸೋಣ. 

-Argodu Suresh Shenoy

0 likes

Published By

Argodu Suresh Shenoy

argodusureshshenoy

Comments

Appreciate the author by telling what you feel about the post 💓

Please Login or Create a free account to comment.