ಸುರಕ್ಷಿತವಾಗಿದ್ದು ಕರೋನಾವನ್ನು ಒದ್ದೋಡಿಸುವುದೇ ಈ ಶತಮಾನದ ಮಹಾವಿಜಯ!

ಕರೋನಾವನ್ನು ಒದ್ದೋಡಿಸುವ ಸದಾವಕಾಶ ಇಂದು ನಮಗೆ ದೊರಕಿದೆ. ಅದರಲ್ಲಿನ ಗೆಲುವು ಶತಮಾನದ ಮಹಾಯಶಸ್ಸುಅಥವಾ ಮಹಾವಿಜಯ ಅನಿಸಿಕೊಂಡು ಇತಿಹಾಸದಲ್ಲಿ ದಾಖಲಾಗುತ್ತದೆ. ಇಂಥಹ ಸದವಕಾಶವನ್ನು ದೇವರು ನಮಗೆ ಅನಾಯಾಸವಾಗಿ ನೀಡಿರುವಾಗ ಕರೋನಾ ಸಾಂಕ್ರಾಮಿಕದ ಉರಿಗಂಜಿ ಓಡಿ ಹೋಗುವುದು ಸರಿಯೇ?

Originally published in kn
Reactions 0
380
Argodu Suresh Shenoy
Argodu Suresh Shenoy 19 May, 2021 | 1 min read
Do you think India is not a safe place to live in?


ಜಗತ್ತಿನ ಅತ್ಯಂತ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ, ವೈವಿಧ್ಯಗಳ ಆಗರ, ಹಲವು ಧರ್ಮ, ಸಂಸ್ಕೃತಿಗಳ ನಲೆಬೀಡಾದ ಭಾರತದ ಪ್ರಜೆಗಳು ಕರೋನಾತಂಕದ ಕಾರಣದಿಂದ ಆತಂಕದ ಕಾರ್ಮೋಡಗಳ ನಡುವೆ ಬೇಯುತ್ತಿದ್ದಾರೆ. ಬದುಕುತ್ತಿದ್ದಾರೆ. ಮರಣದ ಕುಣಿಕೆ ಎಲ್ಲಿ ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ಸುತ್ತಿಕೊಳ್ಳುವದೊ ಎಂದು ಭಯಭೀತರಾಗಿದ್ದಾರೆ. ಕರೋನಾ ವೈರಸ್ಸಿನ ಅಟ್ಟಹಾಸ ಇದೇ ರೀತಿಯಲ್ಲಿ ಮುಂದುವರಿದರೆ ಭಾರತದಲ್ಲಿ ಒರ್ವನಾದರೂ ಮನುಷ್ಯ ಜೀವಿ ಜೀವಂತವಾಗಿರಬಲ್ಲನೇ ಎಂಬ ಆತಂಕಕ್ಕೆ ಸಿಲುಕಿರುವವರೂ ಇದ್ದಾರೆ. ಈ ಘೋರ ಸಂಕಷ್ಟದ ಸಮಯದಲ್ಲಿ ಸುರಕ್ಷಿತ ದೇಶಕ್ಕೆ ಹೋಗಿ ಸುರಕ್ಷಿತವಾಗಿರ ಬೇಕೆಂದು ಬಯಸುವವರೂ ದೊಡ್ಡ ಸಂಖ್ಯೆಯಲ್ಲಿ ಇದ್ದಿರ ಬಹುದು. ಆದರೆ ಇಂದೂ ಸಹ ಭಾರತವು ಸುರಕ್ಷಿತ ದೇಶವೇ ಆಗಿದೆ ಎಂದು ಯಾರು ಬೇಕಾದರೂ ಘಂಟಾಘೋಷವಾಗಿ ಹೇಳಬಹುದು. ಯಾಕೆಂದರೆ ಈ ಹಿಂದಿನ ಜಗತ್ತಿನ ಇತಿಹಾಸವನ್ನು ಅವಲೋಕಿಸಿದಾಗ ಇದಕ್ಕಿಂತ ಘೋರ ಸಾಂಕ್ರಾಮಿಕ ರೋಗಗಳು ಈ ದೇಶವನ್ನು ಕಾಡಿರುವುದು ಇತಿಹಾಸದ ಕಾಲದಲ್ಲಿಯೂ ಕಂಡು ಬಂದಿದೆ.

ಕ್ರಿ.ಶ. ೫೪೧ರಲ್ಲಿ ಪ್ಲೇಗ್ ಸಾಂಕ್ರಾಮಿಕ ರೋಗ ಪ್ರಥಮ ಬಾರಿಗೆ ಬಂದಾಗ ಜಗತ್ತಿನ ಅರ್ಥ ಭಾಗದಷ್ಟು ಜನರನ್ನು ಬಲಿ ತೆಗೆದು ಕೊಂಡಿತ್ತಂತೆ. ಬ್ಲ್ಯಾಕ್‌ಡೆತ್ ಹೆಸರಿನಲ್ಲಿ ಎರಡನೇ ಬಾರಿ ೧೩೪೭ರಲ್ಲಿ ಬಂದ ಪ್ಲೇಗ್ ಯುರೋಪಿನಲ್ಲಿ ೨೦೦ ದಶಲಕ್ಷ ಜೀವಗಳನ್ನು ಬಲಿ ಪಡೆಯಿತಂತೆ. ೧೫ನೇ ಶತಮಾನದಲ್ಲಿ ಏಷ್ಯಾ ಹಾಗೋ ಅರೇಬಿಯನ್‌ರನ್ನು ಕಾಡಿದ ಸಿಡುಬು ಪ್ರತಿ ಹತ್ತರಲ್ಲಿ ಮೂವರನ್ನು ಬಲಿ ಪಡೆದುಕೊಂಡಿತ್ತಂತೆ. ಭಾರತದ ಜನಸಂಖ್ಯೆಯಲ್ಲಿ ೧೯೨೧ ಕಾಲವನ್ನು ಮಹಾಕುಸಿತದ ವರ್ಷ (ಗ್ರೇಟ್ ಡಿವೈಡ್) ಎಂದು ಕರೆಯಲಾಗುತ್ತದೆ. ಯಾಕೆಂದರೆ ಆಗ ಬಂದ ಸ್ಪ್ಯಾನಿಷ್ ಫ್ಲ್ಯೂ ಎಂಬ ಕಾಯಿಲೆಯಿಂದ ವಿಶ್ವದಾದ್ಯಂತ ಐದರಿಂದ ಹತ್ತು ಕೋಟಿ ಜನರು ಅಸುನೀಗಿದರೆಂದು ಅಂದಾಜಿಸಲಾಗುತ್ತದೆ. ಅದರಲ್ಲಿ ಭಾರತದಲ್ಲಿ ಸತ್ತವರ ಸಂಖ್ಯೆಯೂ ಗಣನೀಯವಾಗಿತ್ತು. ಯಾವಾಗ ಜೀವಿಗಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತಾ ಹೋಯಿತು ಆಗ ಈ ವೈರಸ್, ಕಾಯಿಲೆಗಳು ಬಾಲಮೊಡಚಿಕೊಂಡು ಬಿಟ್ಟವು. ಅದರಂತೆ ಇನ್ನು ಒಂದೆರಡು ವರ್ಷಗಳೊಳಗೆ ಕರೋನಾ ವೈರಸ್ಸಿನ ಪ್ರತೊರೋಧಕ ಶಕ್ತಿ ಜನರ ಶರೀರದಲ್ಲಿ ಉತ್ಪತ್ತಿಯಾದಾಗ ಆಗೀನ ಪೀಳಿಗೆಯಲ್ಲಿ ಸಾಂಕ್ರಾಮಿಕ ರೋಗಗಳ ಪ್ರಸರಣ ಕಡಿಮೆ ಆಗಿಯೇ ಆಗುತ್ತದೆ. ಅಲ್ಲದೇ ದೇಶಾದ್ಯಂತ ಕೇಂದ್ರ, ರಾಜ್ಯ ಸರಕಾರಗಳೆರಡು ದೇಶಾದ ಪ್ರತಿಯೊಬ್ಬ ಪ್ರಜೆಗೂ ಕೋವಿಡ್-೧೯ ಕಾಯಿಲೆಯ ವಿರುದ್ಧ ಸಂಶೋಧಿಸಿರುವ ಲಸಿಕೆಗಳನ್ನು ಉಚಿತವಾಗಿ ನೀಡುವ ಅಭಿಯಾನ ಆರಂಭಿಸಿವೆ. ಇದಾಗಲೇ ೧೫ ಕೋಟಿ ಜನರಿಗೆ ಪ್ರಥಮ ಡೋಸ್ ಹಾಗೂ ೪ಕೋಟಿ ಜನರಿಗೆ ಎರಡೂ ಡೋಸ್ ಲಸಿಕೆಯನ್ನು ನೀಡಿ ಆಗಿದೆ. ಎರಡು ಡೋಸ್ ಲಸಿಕೆ ಪಡೆದು ಕೊಳ್ಳುವುದರಿಂದ ಶೇಕಡಾ ೯೫ ರಷ್ಟು ಕೋವಿಡ್ -೧೯ ಕಾಯಿಲೆಯಿಂದ ನಾವು ರಕ್ಷಿಸಲ್ಪಡುತ್ತೇವೆ. ಕರೋನಾ ಸೋಂಕು ತಗಲಿದರೂ ಸಹ ಅದು ಸೌಮ್ಯ ಲಕ್ಷಣಗಳನ್ನಷ್ಟೇ ತೋರಿ ನಮ್ಮನ್ನು ತೊರೆದು ಹೋಗುತ್ತದೆ. ಮರಣಾಂತಿಕವಾಗುವುದಿಲ್ಲ. ಇದಾಗಲೇ ಅಮೆರಿಕದಲ್ಲಿ ಕರೋನಾ ಲಸಿಕೆಯ ಎರಡು ಡೋಸ್ ತೆಗೆದುಕೊಂಡವರಿಗೆ ಮಾಸ್ಕನ್ನು ಧರಿಸ ಬೇಕೆಂಬ ನಿಯಮದಿಂದಲೂ ಸಹ ವಿನಾಯತಿ ನೀಡಲಾಗಿದೆ. 

 ಅದಕ್ಕಿಂತ ಭಾರತೀಯರು ಮತ್ತೂ ಪುಣ್ಯವಂತರು ಯಾಕೆಂದರೆ ಇಲ್ಲಿ ಹಿರಿಯರೂ ರೂಪಿಸಿರುವ ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವಂತಹ ಪಾರಂಪರಿಕ ಆಹಾರ ಪದ್ಧತಿಗಳಿವೆ. ಅದರೊಂದಿಗೆ ಪರಿಸರವು ಸಹ ನಮ್ಮ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವಂತೆ ವರ್ತಿಸುತ್ತದೆ. ಅಡುಗೆಯಲ್ಲಿ ಬಳಸುವ ಮಸಾಲೆ ವಸ್ತುಗಳು, ಕಾಲಕ್ಕನುಗುಣವಾಗಿ ಬೆಳೆಯುವ ತರಕಾರಿ, ಹಣ್ಣು-ಹಂಪಲುಗಳು, ಅವುಗಳನ್ನು ಬಳಸಲೆಂದೇ ಆಚರಿಸುವ ಹಬ್ಬಗಳು, ಉತ್ಸವಾದಿಗಳಲ್ಲಿ ಮಾಡುವ ಅನ್ನಸಂತರ್ಪಣೆ, ಇಲ್ಲಿನ ಬಿಸಿಲು, ಮಳೆ, ಚಳಿ ಎಲ್ಲವುದರಿಂದಲೂ ಮಾನವನು ತನ್ನ ರೋಗಪ್ರತಿರೋಧಕ ಶಕ್ತಿಯನ್ನು ಸಹಜವಾಗಿ ಹೆಚ್ಚಿಸಿ ಕೊಳ್ಳಬಹುದಾಗಿದೆ. ನಮ್ಮ ಹಿರಿಯರು ಋಷಿ-ಮುನಿಗಳು ಶೋಧಿಸಿದ ಆಯುರ್ವೇದ, ಯೋಗಾಸನಗಳು ಅಡ್ಡ ಪರಿಣಾಮಗಳಿಲ್ಲದೇ ತನ್ನ ಆರೋಗ್ಯವನ್ನು ರಕ್ಷಿಸಿಕೊಳ್ಳುವಂತಹ ಕೊಡುಗೆಯನ್ನಾತನಿಗೆ ನೀಡುತ್ತವೆ. ಮಾನಸಿಕ ಕ್ಷೆಭೆಯಿಂದ ಪಾರಾಗಲು ಪ್ರಾಣಾಯಾಮ, ಧ್ಯಾನ, ಜಪ-ತಪ, ಇಷ್ಟದೇವರ ಸ್ಮರಣೆ, ತೀಥಯಾತ್ರೆ, ಪೂಜೆಯಿಂದ ಸಾಧ್ಯವಿದೆ. 

ಪ್ಲೇಗ್, ಕಾಲರಾ, ಕರೋನಾದಂತಹ ಸಾಂಕ್ರಾಮಿಕ ರೋಗಗಳೊಂದಿಗೆ ಭೂಕಂಪ, ಸುನಾಮಿ, ಚಂಡಮಾರುತಗಳಿಂದ ಆಗುವ ಜೀವಹಾನಿ ಹಾಗೂ ಆಸ್ತಿಪಾಸ್ತಿಗಳ ಹಾನಿಯೂ ಸಹ ಎಲ್ಲರಿಗೂ ಗೊತ್ತಿರುವಂತಹದ್ದೇ. ಇದರಿಂದ ಸ್ಪಷ್ಟವಾಗುವುದೆಂದರೆ ಸಾಂಕ್ರಾಮಿಕ ರೋಗಗಳು, ಪ್ರಕೃತಿ ವಿಕೋಪಗಳು ಭೂಮಂಡಲದ ಎಲ್ಲೆಡೆಯೂ ನಡೆಯುವ ಸಹಜ ಪ್ರಕ್ರಿಯೆಗಳು. ಅದನ್ನು ಎಲ್ಲಿದ್ದರೂ, ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಇಂದು ಜಗತ್ತು ನಮ್ಮ ಅಂಗೈನಲ್ಲಿದೆ. ಎಲೆಕ್ಟ್ರಾನಿಕ್ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ದೆಶೆಯಿಂದ, ವಿಮಾನಗಳು, ಅವುಗಳಿಗಿಂತೆ ವೇಗವಾಗಿ ಹೋಗುವ ರೈಲುಗಳ ಕಾರಣದಿಂದ ಅದು ಸಾಧ್ಯವಾಗಿದೆ. ಇದು ತಾಂತ್ರಿಕತೆಯ ವಿಕ್ರಮ! ಅದರ ಜೊತೆಗೆ ವೈದ್ಯಕೀಯ ವಿಜ್ಞಾನವು ಮಹತ್ತರವಾಗಿ ಬೆಳವಣಿಗೆ ಹೊಂದಿದೆ. 

ಇಂದು ಭಾರತದಲ್ಲಿ ಕರೋನಾ ಸೋಂಕಿಗೆ ಸಿಲುಕಿದವರ ಒಟ್ಟುಸಂಖ್ಯೆ ದೇಶದ ಒಟ್ಟು ಜನಸಂಖ್ಯೆಯ ೨ % (ಶೇಕಡಾ ೨) ಸಹ ಆಗಿಲ್ಲ. ಆದರೆ ಚಿಕಿತ್ಸೆಗಾಗಿ ಇಲ್ಲಿ ಇಷ್ಟೊಂದು ಹಾಹಾಕಾರವಾಗುತ್ತಿರುವುದು ಯಾಕೆ? ಕರೋನ ವೈರಸ್ ಅಥವಾ ಕೋವಿಡ್ ರೋಗದ ಅಟ್ಟಹಾಸದ ಜೊತೆಗೆ ಇಂದು ಉಂಟಾಗಿರುವ ನೈತಿಕ ಅಧಃಪತನದಿಂದ ಇಲ್ಲಿನ ಜನ ಹೆಚ್ಚು ಹೆಚ್ಚು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದೇ ಬಹುಪಾಲ ಜನರ ಅಂಬೋಣ. ಇದು ಹೇಗೆಂದರೆ ಒಂದು ಬಾಟಲಿಯಲ್ಲಿ ವಿಷ ತುಂಬಿ ಹಂಚಿದರೆ ಅದು ಕುಡಿದವರೆಲ್ಲರನ್ನೂ ಕೊಲ್ಲುತ್ತದೆ ಅದೇ ಬಾಟಲಿಯಲ್ಲಿ ಅಮೃತವನ್ನು ತುಂಬಿ ಹಂಚಿದರೆ ಕುಡಿದವರೆಲ್ಲರನ್ನೂ ಚಿರಂಜೀವಿಗಳಾಗುತ್ತಾರೆ. ಬಾಟಲಿ ಒಂದೇ ಆದರೂ ಅದರೊಳಗಿರುವ ದ್ರವದಿಂದ ಬದಲಾವಣೆಗಳು ಘಟಿಸುವಂತೆ ದೇಶ ಪುಣ್ಯಭೂಮಿ ಭಾರತವೇ ಆದರೂ ಅದರೊಳಗಿರುವ ಭೃಷ್ಟ, ಅಮಾನವೀಯ, ಸ್ವಹಿತಾಸಕ್ತಿಯಯಳ್ಳ, ತಮ್ಮ ಲಾಭವನ್ನಷ್ಟೇ ಬಯಸುತ್ತ ನೈತಿಕತೆಯನ್ನೇ ಮರೆತಿರುವ ಅಮಾನುಷ, ತುಚ್ಛ ಜನರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ ಎಂದು ಅನ್ನಬಹುದೇನೋ! ಇಂಥಹ ಅಮಾನುಷ ಅಸುರೀ ಜನರಲ್ಲಿ ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು, ಉದ್ಯಮಿಗಳು, ವೃತ್ತಿ ನಿರತರು, ವ್ಯಾಪಾರಿಗಳು ಇನ್ನಿತರರು ಇದ್ದಿರಬಹುದು!? ಪ್ರತಿಯೊಂದು ವಸ್ತುಗಳನ್ನು ಖರೀದಿಸುವಾಗ ಕಮೀಶನ್ ಆಶೆ ಕೆಲವರಿಗಾದರೆ, .... ಮದುವೆಯಲ್ಲಿ ಉಂಡವನೇ ಜಾಣ ಎನ್ನುವ ಗಾದೆಯಂತೆ ಇಂತಹ ಸಂದರ್ಭದಲ್ಲೂ ಲಾಭದಾಶೆಗೆ ಬಿದ್ದು ಕಾಳಸಂತೆಕೋರರು ವಸ್ತುಗಳ ಅಭಾವ ಸೃಷ್ಟಿಸಿ ಅಥವಾ ಕಲಬೆರಕೆ ಮಾಡಿ, ಒಂದಕ್ಕೆರಡು ಬೆಲೆ ಏರಿಸಿ ವೈದ್ಯಕೀಯ ಸಲಕರಣೆಗಳಿಗೂ, ಸಾಮಾನ್ಯ ಜನರ ಜೀವನಾವಶ್ಯಕ ವಸ್ತುಗಳಿಗೂ, ಆರೋಗ್ಯ ರಕ್ಷಣೆಯ ಸೇವೆಗೂ ದುಬಾರಿ ಬೆಲೆ ಪಡೆದು ಶೋಷಿಸುವ ನೀಚರು ಇದ್ದಾರೆ. ಇವರಿಗೆ ಜನರ ಸಂಕಷ್ಟಕ್ಕೆ ಸ್ಫಂಧಿಸುವುದಕ್ಕಿಂತ ತಮ್ಮ ಖಜಾನೆಗೆ ಹರಿದು ಬರುವ ಹಣದ ಮೇಲೆಯೇ ಹೆಚ್ಚು ಪ್ರೀತಿ! 

ಸಂಕಷ್ಟದ ಸಂದರ್ಭದಲ್ಲಿಯೂ ಲಾಭದಾಶೆಯುಳ್ಳ ನೀಚರ ದೆಸೆಯಿಂದಲೇ ಸೋಂಕಿಗೆ ಸಿಲುಕಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದರೂ ಬಹಳಷ್ಟು ನಿಷ್ಪಾಪಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್‌ಗಳು, ವೆಂಟಿಲೇಟರ್‌ಗಳು, ಆಮ್ಲಜನಕ ಸಿಗದೇ ಅವರು ಸಾಯುವಂತಾಯಿತಂತೆ. ಜೀವವಾಯು ಸಮಯಕ್ಕೆ ಸರಿಯಾಗಿ ಸಿಗದೇ ಸತ್ತ ಸಾವುಗಳಿಗೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು? ಹಾಗಂತ ದೇಶದಲ್ಲಿರುವ ಎಲ್ಲಾ ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿ, ವ್ಯಾಪಾರಿ, ವೃತ್ತಿ ನಿರತರು, ವ್ಯಾಪಾರಿ ಜನರು ನೀಚರು ಅಥವಾ ಭೃಷ್ಟರು ಎಂದು ಇದರರ್ಥವಲ್ಲ. ಆದರೆ ನೀಚರು ಇಷ್ಟೊಂದು ಅದಃಪತನಕ್ಕೆ ಇಳಿದಿದ್ದು ಹೇಗೆ? ಇಂದು ಬೇರೆಯವರಿಗೆ ಬಂದ ಕಷ್ಟ, ದುಃಖ; ನಾಳೆ ತನಗೂ, ತನ್ನವರಿಗೂ ಬಾರದು ಎನ್ನುವ ಭಂಡ ಧೈರ್ಯದಿಂದಲೇ, ಅಥವಾ ದುಡ್ಡುದ್ದವನೇ ದೊಡ್ಡಪ್ಪ ಎನ್ನುವ ಗಾದೆಯಂತೆ ಹಣದಿಂದ ಎಲ್ಲವನ್ನೂ ಕೊಳ್ಳಲು ಸಾಧ್ಯ ಎಂಬ ಹಮ್ಮಿನಿಂದಲೇ! ಉತ್ತರಿಸುವುದು ಕಷ್ಟ ಆದರೆ ಇವರನ್ನು ಧರ್ಮ ವಿಮುಖ (ಧರ್ಮಭೃಷ್ಟ)ರು ಎಂದು ಕರೆದರೆ ತಪ್ಪಾಗಲಾರದು. 

ಮಹಾಭಾರತದ ಸ್ವರ್ಗಾರೋಹಣ ಪರ್ವದಲ್ಲಿ ಮಹರ್ಷಿ ವ್ಯಾಸರು 

ಊಧ್ರ್ವಬಾಹುರ್ವಿರೌಮ್ಯೇಷ ನ ಚ ಕಶ್ಚಿಚ್ಛೃಣೋತಿ ಮೇ | 

ಧರ್ಮಾದರ್ಥಶ್ಚ ಕಾಮಶ್ಚ ಸ ಕಿಮರ್ಥ ನ ಸೇವ್ಯತೇ || (ಅಧ್ಯಾಯ ೫ ,ಶ್ಲೋಕ ೪೬) 

ಹೀಗೆಂದು ಹೇಳುತ್ತಾರೆ. (ಅರ್ಥ : ನಾನು ಎರಡೂ ಕೈಗನ್ನೆತ್ತಿ ಭರವಸೆಯಿಂದ ಹೇಳುತ್ತಿದ್ದೇನೆ. ಆದರೆ ಯಾರೂ ನನ್ನ ಮಾತುಗಳನ್ನು ಗಮನಿಸುತ್ತಿಲ್ಲ. ಎಲೈ ಮನುಷ್ಯನೇ ಧರ್ಮದಿಂದ ಅರ್ಥ ಮತ್ತು ಕಾಮ ಇವೆರಡೂ ದೊರಕುತ್ತವೆ. ಹೀಗಿರುವಾಗ ನೀವು ಧರ್ಮವನ್ನೇಕೆ ಅನುಸರಿಸುವುದಿಲ್ಲ ?’) ಧರ್ಮಭೃಷ್ಟರೇ ಯಾಕೆಂದು ವ್ಯಾಸರ ಪ್ರಶ್ನೆಗೆ ಉತ್ತರಿಸ ಬೇಕಾಗಿದೆ. 

ಭಾರತ ವಿಶ್ವದಲ್ಲಿಯೇ ಅತ್ಯಧಿಕ ಜನಸಂಖ್ಯೆಯುಳ್ಳ ಎರಡನೇ ದೇಶ. ನಮ್ಮ ದೇಶದಲ್ಲಿ ಪ್ರತಿ ಕಿಲೋಮೀಟರ ವಿಸ್ತೀರ್ಣದಲ್ಲಿ ೪೧೦(೪೧೧/ಏm೨)ಕ್ಕಿಂತ ಅಧಿಕ ಜನರು (ಒಟ್ಟು ಜನಸಂಖ್ಯೆ ೧೩೫ ಕೋಟಿ) ವಾಸಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚು. ವಿಶ್ವದಲ್ಲಿಯೇ ಅತ್ಯಂತ ಸುರಕ್ಷಿತ ದೇಶ ಎಂದು ಪರಿಗಣಿಸಿರುವ ಅಮೆರಿಕಾದಲ್ಲಿ ಪ್ರತಿ ಕಿಲೋಮೀಟರ ವಿಸ್ತೀರ್ಣದಲ್ಲಿ ಕೇವಲ ೩೪ (೩೪/ಏm೨) ಜನರು (ಒಟ್ಟು ಜನಸಂಖ್ಯೆ ೩೩ಕೋಟಿ) ಮಾತ್ರ ವಾಸಿಸುತ್ತಾರೆ. ಆದರೆ ಅಲ್ಲಿ ಕೊರೋನಾ ಸೋಂಕಿಗೆ ಸಿಲುಕಿದವರು ಮೂರು ಕೋಟಿ ಮೂವತ್ತು ಲಕ್ಷಕ್ಕಿಂತ ಹೆಚ್ಚು. ಭಾರತದಲ್ಲಿ ಅದು ಎರಡೂವರೆ ಕೋಟಿಯ ಆಸುಪಾಸಿನಲ್ಲಿದೆ. ಸಾಂಕ್ರಾಮಿಕ ರೋಗವೊಂದರ ಪ್ರಸರಣ ಯಾವ ರೀತಿಯಿಂದ ಘಟಿಸುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಜನದಟ್ಟಣಿ ಅಧಿಕವಿರುವೆಡೆ ಅದು ತೀವ್ರವಾಗಿ ಹರಡುತ್ತದೆ. ಆ ಕಾರಣದಿಂದಲೇ ಭಾರತದ ಮುಂಬೈ, ಬೆಂಗಳೂರು, ಕಲ್ಕತ್ತ, ಚಿನ್ನೈ, ದೆಹಲಿಯಂತಹ ನಗರಗಳಲ್ಲಿ ಕರೋನಾ ಸೋಂಕಿತರು ಸಂಖ್ಯೆ ಸಹಜವಾಗಿ ಅಧಿಕವಾಗಿದೆ. ಇದನ್ನು ಗಮನಿಸಿದರೆ ಕರೋನದ ವಿಷಯದಲ್ಲಿ ಭಾರತ ಇನ್ನೂ ಸುರಕ್ಷಿತವಾಗಿಯೇ ಇದೆ. ಇಲ್ಲಿಯೇ ಇದ್ದು ಸೂಕ್ತ ಮುಂಜಾಗ್ರತೆ (ಮಾಸ್ಕ, ಸಾಮಾಜಿಕ ಅಂತರ), ಲಸಿಕೆ ಪಡೆದುಕೊಂಡು ಕರೋನಾವನ್ನು ಸಮರ್ಥವಾಗಿ ಹಿಮ್ಮೆಟ್ಟಿಸುವ ಎಲ್ಲಾ ಅವಕಾಶಗಳೂ ಭಾರತೀಯರಿಗಿದೆ. 

ದೇಶದಲ್ಲಿ ಇರುವ ವೈದ್ಯಕೀಯ ಸೌಲಭ್ಯಕ್ಕಿಂತ ಅಧಿಕ ಪ್ರಮಾಣದಲ್ಲಿ ಒಮ್ಮೆಗೆ ರೋಗಿಗಳು ಚಿಕಿತ್ಸೆಗೆ ಬಂದಿರುವುದೇ ಇಂದಿನ ಸಮಸ್ಯೆಗೆ ಮತ್ತೊಂದು ಕಾರಣ. ಇಂಥಹ ಸಮಯದಲ್ಲಿ ಸರಕಾರಗಳು ದೊಡ್ಡ ದೊಡ್ಡ ಛತ್ರಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನು ಆರಂಭಿಸ ಬೇಕು. ಖಾಸಗಿ ವೈದ್ಯಕೀಯ ಸಿಬ್ಬಂದಿಗಳ ಸಹಾಯ ಪಡೆಯ ಬೇಕು. ಅದು ಸೇವಾರೂಪದಿಂದಲೂ ಆಗಬಹುದು ಅಥವಾ ಪ್ರತಿಫಲದ ರೂಪದಲ್ಲೂ ಇರಬಹುದು. ಸಮುದ್ರದಲ್ಲಿ ಅಪಘಾತಕ್ಕೆ ಸಿಲುಕಿದ ಹಡಗಿನಲ್ಲಿ, ಅಥವಾ ವಿಮಾನ, ರೈಲ್ವೆ ಅಪಘಾತದಲ್ಲಿ ಸಿಲುಕಿರುವ ಜನರ ಜೀವರಕ್ಷಣೆಗೆ ಹಗಲು-ರಾತ್ರಿಯೆನ್ನದೇ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುವಂತೆ ಈಗಲೂ ಆಗ ಬೇಕಾಗಿದೆ. ಆಸ್ಪತ್ರೆಗಳಿಗೆ ಬೇಕಾಗುವ ಸೌಲಭ್ಯಗಳನ್ನು ಜನಸಾಮಾನ್ಯರೇ ಸಹೃದಯಿ ದಾನಿಗಳಿಂದ ಸಂಗ್ರಹಿಸಿ ಕೊಡಬಹುದು. ಅಥವಾ ಜನಸಾಮಾನ್ಯರು ತಾವೇ ತಮ್ಮಿಂದಾದಷ್ಟು ದೇಣಿಗೆ ಕೊಟ್ಟು ಸರ್ವ ಬಂಧುಗಳಿಗೂ ಸಕಾಲದಲ್ಲಿ ಉತ್ತಮ ಚಿಕಿತ್ಸೆ ದೊರಕಿ ಅವರನ್ನು ಕರೋನಾ ವೈರಸ್ಸಿನ ಕಪಿಮುಷ್ಠಿಯಿಂದ ಹೊರಗೆ ತರಬಹುದಾಗಿದೆ. (ಈ ದೇಶದ ಪ್ರತಿಯೊಬ್ಬರೂ ಕೇವಲ ನೂರು ನೂರು ರೂಪಾಯಿಗಳನ್ನು ದೇಣಿಗೆ ನೀಡಿದರೂ ಅದು ಸಹಸ್ರಾರು ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತವಾಗುತ್ತದೆ) ರಾಜಕೀಯ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ತಮ್ಮ ಪಾರ್ಟಿಫಂಡಿನಿಂದ ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚಮಾಡುತ್ತವೆ. ದೇಶವೇ ಸಂಕಷ್ಟಕ್ಕೆ ಸಿಲುಕಿರುವ ಇಂತಹ ನಾಜೂಕಿನ ಸಂದರ್ಭದಲ್ಲಿ ಅವರು ತಮ್ಮ ಪಕ್ಷದ ನಿಧಿಯಿಂದ ವೈದ್ಯಕೀಯ ಸೌಲಭ್ಯಕ್ಕಾಗಿ ಧನ ಸಹಾಯ ಮಾಡಲು ಸಾಧ್ಯವಿಲ್ಲವೇ? ಇನ್ನೊಬ್ಬರಿಗೆ ನೆರವಾಗುವುದೇ ನಿಜವಾದ ಮಾನವತೆ ಅಲ್ಲವೇ?

ಒಟ್ಟಾರೆಯಾಗಿ ಹೇಳಬೇಕೆಂದರೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲವನ್ನೂ ಸರಕಾರವೇ ಮಾಡಲಿ ಎಂದು ಪ್ರಜೆಗಳು ಸುಮ್ಮನಿದ್ದು ಬಿಡಬಾರದು. ನಮ್ಮ ಹಾಗೂ ನಮ್ಮವರ ಪ್ರಾಣಕ್ಕೆ ಸಂಚಕಾರ ತರಬಲ್ಲ ವೈರಿ ಕರೋನಾ ವೈರಸ್ಸಿನ ತ್ವರಿತ ಉಚ್ಚಾಟನೆಗ ಎಲ್ಲರೂ ಸಂಘಟಿತರಾಗಿ ತನು-ಮನ-ಧನ ಸಹಿತ ಪಾಲ್ಗೊಳ್ಳ ಬೇಕಾದ ಜರೂರು ಈಗ ಬಂದಿದೆ. ಅಲ್ಲದೇ ಮೂರನೇ ಅಲೆ ಮಕ್ಕಳ ಮೇಲೆ ಸವಾರಿ ಮಾಡುತ್ತದೆ ಎಂದು ವಿಜ್ಷಾನಿಗಳು ಎಚ್ಚರಿಸುತ್ತಿರುವುದರಿಂದ ಹಾಗೇನಾದರೂ ಆದರೆ ಆಗ ಪರಿಸ್ಥಿತಿ ಮತ್ತಷ್ಟು ಕಠೋರವಾಗಲಿದೆ. ಭವಿಷ್ಯದ ಪೀಳಿಗೆಯ ಮೇಲಿನ ಗದಾಪ್ರಹಾರವಾಗಲೂ ಬಹುದು. ಆದ್ದರಿಂದ ಎಲ್ಲರೂ ಈಗಲೇ ಮುಂಜಾಗ್ರತೆ ವಹಿಸುವ ಅಗತ್ಯವಿದೆ. ಇಂದು ಆ ದೇಶ ಸುರಕ್ಷಿತವೆಂದು ಹೋದರೆ ನಾಳೆಗೆ ಈ ಹೆಮ್ಮಾರಿ ಅಲ್ಲಿಗೂ ವಕ್ಕರಿಸ ಬಹುದು. ಆಗ ಮತ್ತೊಂದು ಸುರಕ್ಷಿತ ದೇಶವನ್ನು ಹುಡುಕಬೇಕಾಗುತ್ತದೆ. ಅಲ್ಲಿಗೂ ಏನಾದರೂ ಸಮಸ್ಯೆ ಬಂದಾಗ ಅಲ್ಲಿಂದ ಮತ್ತೊಂದು ದೇಶಕ್ಕೆ ಓಡಿಹೋಗಬೇಕು. ಅದಕ್ಕಿಂತ ಇದ್ದಲ್ಲಿಯೇ ಇದ್ದು ನಾವುಗಳು ಲಸಿಕೆ, ಉತ್ತಮ ಆಹಾರ, ಮುಂಜಾಗೃತೆಯಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಕರೋನಾ ಅಥವಾ ಕೋವಿಡ್ -೧೯ ಎಂಬ ಹೆಮ್ಮಾರಿಯನ್ನೇ ನಾಮಾವಶೇಷಗೈದರೆ ಆಗ ನಮ್ಮ ದೇಶವೇ ನಂದನವನವಾಗಲಾರದೇ? ಸಂಪೂರ್ಣ ಕರೋನಾವೆಂಬ ಶತ್ರುನಾಶದಿಂದ ಮುಂದಿನ ನಮ್ಮ ಪೀಳೆಗೆಯೂ ಸಹ ಸುರಕ್ಷಿತವಾಗಿರುವುದಲ್ಲವೇ? ಕರೋನಾವನ್ನು ಒದ್ದೋಡಿಸುವ ಸದಾವಕಾಶ ಇಂದು ನಮಗೆ ದೊರಕಿದೆ. ಅದರಲ್ಲಿನ ಗೆಲುವು ಶತಮಾನದ ಮಹಾವಿಜಯ ಅನಿಸಿಕೊಂಡು ಇತಿಹಾಸದಲ್ಲಿ ದಾಖಲಾಗುತ್ತದೆ. ಇಂಥಹ ಸದವಕಾಶವನ್ನು ದೇವರು ನಮಗೆ ಅನಾಯಾಸವಾಗಿ ನೀಡಿರುವಾಗ ಕರೋನಾ ಸಾಂಕ್ರಾಮಿಕದ ಉರಿಗಂಜಿ ಓಡಿ ಹೋಗುವುದು ಸರಿಯೇ? ಖಂಡಿತ ಸರಿಯಲ್ಲ. ಭಾರತದ ದೇಶವಾಸಿಗಳೆಲ್ಲರ ಸುರಕ್ಷತೆಯಲ್ಲಿ ನನ್ನ ಹೊಣೆಯೂ ಇದೆ ಅನ್ನುವುದನ್ನು ಎಂದೆಂದೂ ಯಾರೂ ಮರೆಯಬಾರದು. 

ಜೈ ಭಾರತ ಮಾತಾಕೀ ಜೈ

ಜೈ ಕನ್ನಡ ಮಾತಾಕೀ e

0 likes

Published By

Argodu Suresh Shenoy

argodusureshshenoy

Comments

Appreciate the author by telling what you feel about the post 💓

Please Login or Create a free account to comment.