ಪತ್ರಿಕೋದ್ಯಮವು ಪಕ್ಷಪಾತಿಯಾಗಿ ಬದಲಾದರೆ ಜನರಿಗಂತೂ ಒಳಿತಿಲ್ಲ!

ಸತ್ಯ, ನ್ಯಾಯವನ್ನು ಎತ್ತಿಹಿಡಿದು ದುರ್ಬಲರ, ಶೋಷಿತರ, ಧ್ವನಿ ಸತ್ತವರ ಆಶಾಕಿರಣವಾಗಬೇಕಾದ ಪತ್ರಿಕೋದ್ಯಮವು ಪಕ್ಷಪಾತಿಯಾಗುವುದು ಜನಸಾಮಾನ್ಯರಿಗೆ ಒಳಿತಲ್ಲ.

Originally published in kn
Reactions 0
646
Argodu Suresh Shenoy
Argodu Suresh Shenoy 16 Sep, 2020 | 1 min read
Is Indian Media Unbiased


‘ಮಾಧ್ಯಮ ಎಂದರೆ ಇಬ್ಬರ ಮಧ್ಯೆ ಸಂವಹನಕ್ಕೆ ಅವಕಾಶ ಮಾಡಿಕೊಡುವ ಸೇತುವೆ ಅಥವಾ ಸುದ್ದಿ, ಚಿತ್ರ, ಸಂಗೀತ, ಸಾಹಿತ್ಯದ ಮೂಖಾಂತರ ಸಾಮಾನ್ಯ ಜನರಿಗೆ ದೇಶದ ಆಗುಹೋಗುಗಳ ಶಿಕ್ಷಣ ನೀಡುವಂತಹ ಶಿಕ್ಷಕನಿದ್ದಂತೆ! ಬೇರೆ ಬೇರೆ ಕಡೆಯ ವಿಷಯ, ವರದಿ, ಅಚ್ಚರಿ, ಸಂತೋಷ, ದುಃಖ, ನೋವುಗಳನ್ನು ನಮಗೆ ತಿಳಿಸುವುದು ಮತ್ತು ನಮ್ಮಲ್ಲಿರುವ ಅಂತಹದೇ ವಿಷಯಗಳನ್ನು ಒಮ್ಮೆಗೆ ಹಲವಾರು (ಸಹಸ್ರ, ಲಕ್ಷಗಟ್ಟಲೆ) ಜನರಿಗೆ ಅಕ್ಷರ, ದೃಶ್ಯ ಅಥವಾ ಶ್ರಾವ್ಯದ ಮುಖಾಂತರ ತಿಳಿಸುವುದೇ ಮಾಧ್ಯಮಗಳ ಕೆಲಸ.

ಮಾಧ್ಯಮವನ್ನು ಹಲವಾರು ರೀತಿಯಲ್ಲಿ ವಿಂಗಡಣೆ ಮಾಡಬಹುದು ಅಕ್ಷರದಲ್ಲಿ ವರದಿ ಮತ್ತು ಚಿತ್ರವನ್ನು ಮುದ್ರಿಸುವ ಮೂಲಕ ಬೇರೆಯವರಿಗೆ ವಿಷಯ ಅಥವಾ ಮಾಹಿತಿಯನ್ನು ತಿಳಿಸುವದು ಮುದ್ರಣ ಮಾಧ್ಯಮ. ಇದರಲ್ಲಿ ವಾರ್ತಾಪತ್ರಗಳು, ಮ್ಯಾಗಜಿನ್‌ಗಳು ಅಂದರೆ ದೈನಿಕ, ಸಾಪ್ತಾಹಿಕ, ಪಾಕ್ಷಿಕ, ಮಾಸಿಕ ಇತ್ಯಾದಿಗಳು ಬರುತ್ತವೆ. ೨೦೧೮ರಲ್ಲಿ ಭಾರತದಲ್ಲಿ ಸುಮಾರು ೧,೧೮,೨೩೯ ನೋಂದಾಯಿತ(ಆರ್.ಎನ್.ಐ.ನಲ್ಲಿ) ಪತ್ರಿಕೆಗಳಿದ್ದವು. ಹಾಗೂ ಪ್ರತಿ ವರ್ಷವು ಸಹಸ್ರಾರು ಹೊಸ ಹೊಸ ಪತ್ರಿಕೆಗಳನ್ನು ನೋಂದಣಿಗಾಗಿ ಅರ್ಜಿಗಳು ಆರ್.ಎನ್.ಐ.ಗೆ ಬರುತ್ತಿರುತ್ತವೆ. ೨೦೧೯ರಲ್ಲಿನ ಅಂಕಿಸಂಖ್ಯೆಯ ಪ್ರಕಾರ ಭಾರತದಲ್ಲಿ ಪತ್ರಿಕೆಗಳನ್ನು ಓದುವ ವಾಚಕರ ಸಂಖ್ಯೆ ೪೨೮ ಮಿಲಿಯನ್‌ನಷ್ಟಿತ್ತು ಎಂದು ಸಮೀಕ್ಷಕರು ಹೇಳುತ್ತಾರೆ. 

  ಮಾಧ್ಯಮ ಕ್ಷೇತ್ರದ ಮತ್ತೋರ್ವ ಪಾಲುದಾರನೆಂದರೆ ಅದು ‘ಇಲೆಕ್ಟಾನಿಕ್ ಮಾಧ್ಯಮ ಅಥವಾ ದೃಶ್ಯ ಮಾಧ್ಯಮ. ದೃಶ್ಯ(ಚಿತ್ರ) ಮತ್ತು ಧ್ವನಿ(ಶ್ರಾವ್ಯ)ಗಳನ್ನು ಸಂಯೋಜನೆಗೊಳಿಸಿ ವಿದ್ಯುತ್ ತರಂಗಾಂತರಗಳ ಮೂಲಕ ವಿಡಿಯೋ, ಸುದ್ಧಿ, ರೂಪಕ, ಧಾರವಾಹಿ, ಸಿನೇಮಾ ಇತ್ಯಾದಿಗಳನ್ನು ಇಲೆಕ್ಟಾನಿಕ್ ಮಾಧ್ಯಮಗಳು ಪ್ರಸಾರ ಮಾಡುತ್ತವೆ. ಜನ ಸಾಮಾನ್ಯರು ಇದನ್ನು ಟಿ.ವಿ ಅಥವಾ ದೂರದರ್ಶನ ಮಾಧ್ಯಮ ಎಂದೂ ಕರೆಯುತ್ತಾರೆ. ಇಂದು ದೇಶಾದ್ಯಂತ್ಯ ಸರಕಾರದಿಂದ ನಿಯಂತ್ರಿಸಲ್ಪಡುವ ದೂರದರ್ಶನ ಸೇರಿ ಸುಮಾರು ೯೦೦ ಕ್ಕಿಂತ ಅಧಿಕ ಟಿ.ವಿ ಚಾನಲ್‌ಗಳಿದ್ದು ೨೦೦ ಮಿಲಿಯನ್‌ಗಳಿಗಿಂತ ಹೆಚ್ಚಿನ ಮನೆಗಳಲ್ಲಿ ದೂರದರ್ಶನ(ಟಿ.ವಿ.) ಸೆಟ್‌ಗಳಿವೆ. ಹಾಗೂ ೮೩೬ ಮಿಲಿಯನ್‌ನಷ್ಟು ಟಿ.ವಿ. ವೀಕ್ಷಕರಿದ್ದಾರೆ. 

ಮೂರನೆಯದು ಶ್ರಾವ್ಯ ಮಾಧ್ಯಮ. ಇದು ವಿದ್ಯುತ್ ತರಂಗಾಂತರಗಳ ಮೂಲಕವೇ ಪ್ರಸಾರವಾದರೂ ಇಲ್ಲಿ ದೃಶ್ಯಗಳು ಇರುವುದಿಲ್ಲ. ಆಡಿಯೋ ಅಂದರೆ ಕಿವಿಯ ಮೂಲಕ ಕೇಳಿ ನಾವು ಮನಸ್ಸಿನಲ್ಲಿಯೇ ಕಲ್ಪನೆ ಮಾಡಿಕೊಂಡು ಭಾವಪರವಶಗೊಳ್ಳಲು ಈ ಮಾಧ್ಯಮ ಸಹಕರಿಸುತ್ತದೆ. ತಾವು ಮಾಡುತ್ತಿರುವ ಕೆಲಸ-ಕಾರ್ಯಗಳ ಜೊತೆಗೆ ಶ್ರಾವ್ಯದ ಆನಂದವನ್ನು ಸವಿಯಲು ಸಾಧ್ಯವಿದೆ. ರೇಡಿಯೋ ಅಥವಾ ಆಕಾಶವಾಣಿಯೇ ಶ್ರಾವ್ಯ ಮಾಧ್ಯಮದ ಜನಕ ಹಾಂಗೂ ಉದ್ದಾರಕ ಎಂದರೆ ತಪ್ಪಾಗಲಾರದು. ಭಾರತದಲ್ಲಿ ಪ್ರಪ್ರಥಮ ಆಕಾಶವಾಣಿ ಕೇಂದ್ರವು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ೧೯೨೩ರಲ್ಲಿ ಆರಂಭವಾಗಿದ್ದು ಇಂದು ದೇಶಾದ್ಯಂತ್ಯ ೪೭೭ ಬ್ರಾಡ್‌ಕಾಸ್ಟಿಂಗ್ ಸೆಂಟರ್‍ಸ್, ೪೨೦ ಬ್ರಾಡಕಾಸ್ಟಿಂಗ್ ಸ್ಟೇಷನ್ಸ್ ಇದ್ದು ಇವುಗಳಲ್ಲಿ ಸ್ವತಂತ್ರ ಸ್ಟುಡಿಯೋ ಇರುವ ಪರಿಪೂರ್ಣ ಆಕಾಶವಾಣಿ ಕೇಂದ್ರಗಳ ಸಂಖ್ಯೆ ೨೨೭ ಇದೆ. ಇದಲ್ಲದೇ ೪೦೦ಕ್ಕಿಂತ ಅಧಿಕ ಖಾಸಗಿ ಎಫ್.ಎಮ್. ರೇಡಿಯೋ ಕೇಂದ್ರಗಳು ಸಹ ಕಾರ್ಯನಿರ್ವಹಿಸುತ್ತಿವೆ. 

ಮಾಧ್ಯಮದಲ್ಲಿ ಇತ್ತೀಚೆಗೆ ಸದ್ದು ಮಾಡುತ್ತಿರುವ ಮಗದೊಂದು ಮಾಧ್ಯಮವೇ ‘ಸಾಮಾಜಿಕ ಜಾಲತಾಣ ಅಥವಾ ಸೋಶಿಯಲ್ ಮೀಡಿಯಾ. ಇದು ವಾಟ್ಸಪ್, ಫೇಸ್‌ಬುಕ್, ಟ್ವಿಟರ್, ಬ್ಲಾಗ್, ವೆಬ್‌ಸೈಟ್‌ಗಳನ್ನು ಹೊಂದಿರುವ ಪ್ರತ್ಯೇಕ ಮಾಧ್ಯಮವಾಗಿ ಗೋಚರಿಸಿದರೂ ಉಳಿದ ಮೂರು ಮಾಧ್ಯಮ ಮಿತ್ರರಾದ ಮುದ್ರಣ ಮಾಧ್ಯಮ, ಇಲೆಕ್ಟ್ರಾನಿಕ್ ಮಾಧ್ಯಮ ಹಾಗೂ ರೇಡಿಯೋ ಮಾಧ್ಯಮಗಳನ್ನು ಆನ್‌ಲೈನ್ ಮೂಖಾಂತರ ಜನರ ಮನೆ ಬಾಗಿಲಿಗೆ ತಲುಪಿಸುವ ಸೇವಾ ಕಾರ್ಯವನ್ನೂ ಸಹ ಮಾಡುತ್ತಿದೆ. ೧೯೯೧ರ ಅಗಸ್ಟ್‌ನಲ್ಲಿ ಪ್ರಥಮ ವೆಬ್‌ಸೈಟ್ ಜನ್ಮತಾಳಿದರೆ ೨೦೧೪ರೊಳಗೆ ಒಟ್ಟು ಜಾಲತಾಣಗಳ ಸಂಖ್ಯೆ ಒಂದು ಬಿಲಿಯನ್‌ಗೆ ಹೋಗಿ ತಲುಪಿತು. ೨೦೧೮ರ ಅಂಕಿ‌ಅಂಶದಂತೆ ವಿದ್ವಾದ್ಯಂತ್ಯ ಎರಡು ಬಿಲಿಯನ್ ಜಾಲತಾಣ (ವೆಬ್‌ಸೈಟ್ಸ್)ಗಳ ಸೃಷ್ಠಿಯಾಗಿದ್ದು ಅವುಗಳಲ್ಲಿ ನೂರಾರು ಮಿಲಿಯನ್ ಜಾಲತಾಣಗಳು ಸಕ್ರೀಯವಾಗಿದ್ದು ನಾಲ್ಕು ಬಿಲಿಯನ್‌ಗಳಿಗಿಂತ ಅಧಿಕ ಜನರು ಇವುಗಳನ್ನು ವೀಕ್ಷಿಸುತ್ತಾರೆ. 

ಇಷ್ಟೆಲ್ಲ ಬೃಹತ್ ಗಾತ್ರದ ಮಾಧ್ಯಮಗಳಲ್ಲಿ ಪಕ್ಷಪಾತ ರಹಿತ. ನಂಬಿಕಾರ್ಹ ಮಾಧ್ಯಮ ಯಾವುದು ಎಂದು ಕೇಳಿದರೆ ಥಟ್ಟೆಂದು ಉತ್ತರಿಸುವುದು ಸ್ವಲ್ಪ ಕಷ್ಟಕರ ಎಂದೇ ಹೇಳಬೇಕು. ಇತ್ತೀಚೆಗೆ ವಾಮನನಾಗಿ ಹುಟ್ಟಿ ತ್ರಿಮಿಕ್ರಮನಂತೆ ಬೆಳೆದಿರುವ ಸಾಮಾಜಿಕ ಜಾಲತಾಣದ ಬಗ್ಗೆ ಮೆಚ್ಚುಗೆಯೊಂದಿಗೆ ಎಲ್ಲೆಡೆಯೂ ಅಪಸ್ವರಗಳೇ ಹೆಚ್ಚಾಗಿ ಕೇಳಿ ಬರುತ್ತಿವೆ. ಕಳೆದೆರಡು ಸಾರ್ವತ್ರಿಕ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣಗಳನ್ನೇ ಪ್ರಮುಖವಾಗಿ ಬಳಸಿಕೊಂಡಿರುವುದು ಇದರ ಹೆಚ್ಚುಗಾರಿಕೆಯನ್ನು ತೋರುತ್ತದಾದರೂ ಆನ್‌ಲೈನ್, ಫೇಸ್‌ಬುಕ್, ವಾಟ್ಸಫ್‌ಗಳಲ್ಲಿ ಪ್ರಕಟವಾದ ಸುಳ್ಳು, ತಿರುಚಲ್ಪಟ್ಟ ಸುದ್ಧಿಗಳಿಂದ ಹಲವಾರು ಕಡೆ ಕೋಮು ಗಲಭೆಗಳು, ದೊಂಬಿಗಳು ನಡೆದಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಕೆಲವರು ತಮಗಾಗದವರ ತೇಜೋವಧೆ ಮಾಡಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿರುವುದು ಸಹ ದುರದೃಷ್ಟಕರವೆಂದೇ ಹೇಳ ಬೇಕಾಗಿದೆ. ಎಷ್ಟೋ ಸಂದರ್ಭದಲ್ಲಿ ಜಾಲತಾಣಗಳಲ್ಲಿ ದೊರಕುವ ತಪ್ಪು ಮಾಹಿತಿಗಳಿಂದ ಸಾಮಾನ್ಯ ಜನರು ಹಲವಾರು ರೀತಿಯಲ್ಲಿ ಕಷ್ಟಕ್ಕೆ ಸಿಲುಕಿರುವ ಉದಾಹರಣೆಗಳೂ ಇವೆ. ಈ ಎಲ್ಲಾ ಕಾರಣಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವವರು ಒಂದಿಷ್ಟು ಸ್ವಕಟ್ಟಳೆಗಳನ್ನು ಹಾಕಿಕೊಂಡು ಅದರ ವಿಶ್ವಾಸಾರ್ಹತೆಯನ್ನು ಹೆಚ್ಚಿಸ ಬೇಕಾಗಿರುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. 

ಎರಡನೇಯದಾಗಿ ಇಲೆಕ್ಟಾನಿಕ್ ಮಾಧ್ಯಮದ ವಿಷಯಕ್ಕೆ ಬಂದರೆ ಬಹಳಷ್ಟು ಖಾಸಗಿ ಟಿ.ವಿ. ಚಾನಲ್‌ಗಳು ಟಿ.ಆರ್.ಪಿ. ಹೆಚ್ಚಿಸಿಕೊಂಡು ಅಧಿಕಾಧಿಕ ಜಾಹೀರಾತಗಳನ್ನು ಗಳಿಸಿಕೊಳ್ಳುವ ಸಲುವಾಗಿ ತೋರಿಸುವ ‘ಬ್ರೇಕಿಂಗ್ ನ್ಯೂಸ್ಗಳು ಕೆಲವೊಮ್ಮೆ ಅತಿರಂಜಿತವೆನಿಸುವುದು ಇದೆ. ಸುದ್ಧಿಗಳನ್ನು ಪ್ರಸಾರ ಮಾಡುವಾಗ ಆಕ್ಷೇಪಾರ್ಹ ಭಾಗವನ್ನಷ್ಟೇ ತೋರಿಸಿ ವೀಕ್ಷಕರಲ್ಲಿ ತಪ್ಪು ಭಾವನೆ ಮೂಡುವಂತೆ ಆದ ಉದಾಹರಣೆಗಳೂ ಇವೆ. ಕೆಲವು ಟಿ.ವಿ. ಧಾರವಾಹಿಗಳಂತು ಸಹಸ್ರಾರು ಕಂತುಗಳಾದರೂ ಮುಗಿಯುವುದೇ ಇಲ್ಲ. ಟಿ.ವಿ. ವೀಕ್ಷಣೆಯಿಂದ ಕಣ್ಣುಗಳಿಗೂ ಆಯಾಸವಾಗುವ ಸಾಧ್ಯತೆಯೂ ಇದೆ. ಆಕಾಶವಾಣಿ ಶ್ರಾವ್ಯ ಮಾಧ್ಯಮವಾಗಿರುವುದರಿಂದ ಇಂದು ದೇಶದ ೯೦ ಶೇಕಡಾಕ್ಕಿಂತ ಅಧಿಕ ಭಾಗದ ಜನರನ್ನು ತಲುಪುವ ಸಂಗತಿ ನಿಜವಾದರೂ ಪ್ರಮುಖವಾಗಿ ರೆಡೀಯೋ ಇನ್ನೂ ಸರಕಾರದ ನಿಯಂತ್ರಣದಲ್ಲಿಯೇ ಇದೆ. ಅದರಲ್ಲಿ ರೂಪಕ, ನಾಟಕ, ಸಂಗೀತಕ್ಕೆ ಅಧಿಕ ಸಮಯವನ್ನು ಮೀಸಲಿಡುವುದರಿಂದ ಬರುವ ಸುದ್ಧಿಗಳು ಅತ್ಯಲ್ಪ ಈ ಎಲ್ಲಾ ಕಾರಣಗಳಿಂದ ಇಂದಿನ ಯಂತ್ರಯುಗದಲ್ಲಿಯೂ ಭಾರತದ ಜನಸಾಮಾನ್ಯರು ಇನ್ನೂ ಸಹ ವಾರ್ತಾಪತ್ರಿಕೆಗಳ ಮೇಲೆಯೇ ಅಧಿಕ ವಿಶ್ವಾಸವನ್ನು ಇರಿಸಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. 

ಎಲ್ಲಾ ಮಾಧ್ಯಮಗಳ ಪೈಕಿ ಪರಸ್ಪರರ ಭಾವನೆ, ಅಭಿಪ್ರಾಯ ಹಾಗೂ ಆಕಾಂಕ್ಷೆಗಳನ್ನು ಸುಲಭ ಹಾಗೂ ಪರಿಣಾಮಕಾರಿಯಾಗಿ; ಎಂದೆಂದೂ ದಾಖಲಾಗಿ ಉಳಿಯುವಂತೆ ಪತ್ರಿಕೆಗಳು ಮಾಡಬಲ್ಲವು. ೧೫ನೇ ಶತಮಾನದಲ್ಲಿ ಚೀನಿಯರು ಮುದ್ರಣಯಂತ್ರವನ್ನು ಕಂಡುಹಿಡಿದರೂ ಅದನ್ನು ಬಳಕೆಗೆ ತಂದ ಶ್ರೇಯಸ್ಸು ಯುರೋಪಿಯನ್ನರಿಗೆ ಸಲ್ಲುತ್ತದೆ. ಆ ನಂತರ ಪತ್ರಿಕೋದ್ಯಮದ ಬೇರು ಚಿಗುರ ತೊಡಗಿದವು. ಭಾರತದಲ್ಲಿ ೧೭೮೦ರಲ್ಲಿ ‘ಬೆಂಗಾಲ್ ಗೆಜೆಟ್ ಮೂಲಕ ಪತ್ರಿಕೋದ್ಯಮದ ಗಿಡ ಅರಳ ತೊಡಗಿದರೆ ಮಂಗಳೂರು ಸಮಾಚಾರ ಕನ್ನಡದ ಮೊದಲ ಪತ್ರಿಕೆಯಾಗಿ ೧೮೪೩ರಲ್ಲಿ ಬೆಳಕು ಕಂಡಿತು. ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದ ಭಾರತ ದೇಶವನ್ನು ಸ್ವತಂತ್ರಗೊಳಿಸಲು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ೧೮೫೭ರಲ್ಲಿ ಆರಂಭವಾಗಿದ್ದರೆ ಅದಕ್ಕಿಂತ ಪೂರ್ವದಲ್ಲಿಯೇ ಇಲ್ಲಿ ಪತ್ರಿಕೋದ್ಯಮ ಆರಂಭವಾಗಿತ್ತು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ದೇಶವಾಸಿಗಳಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಲು ಪತ್ರಿಕಾ ಮಾಧ್ಯಮವನ್ನು ವಿಪುಲವಾಗಿ ಬಳಸಿದ್ದು ಇತಿಹಾಸದಲ್ಲಿ ಪ್ರಮುಖವಾಗಿ ದಾಖಲಾಗಿದೆ. ದೇಶದ ಪ್ರಮುಖ ಸ್ವಾತಂತ್ರ್ಯ ಸೇನಾನಿಗಳಾದ ಬಾಲಗಂಗಾಧರ ತಿಲಕ(ಕೇಸರಿ), ಮಹಾತ್ಮಾಗಾಂದಿ(ಯಂಗ್ ಇಂಡಿಯಾ, ಹರಿಜನ), ಲಾಲಾ ಲಜಪತ್ ರಾಯ್(ದಿ ಪೀಪಲ್), ಡಾ|| ಅಂಬೇಡ್ಕರ್ (ಮೂಕನಾಯಕ, ಜನತಾ) ಅರವಿಂದ ಘೋಷ, ಸಿ. ಆರ್.ದಾಸ, ದಾದಾ ಬಾಯಿ ನವರೋಜಿ, ಫಿರೋಜ್ ಶಾ ಮೆಹ್ತಾರಂತವರು ಸಹ ತಮ್ಮ ಚಳುವಳಿಯ ತೀಕ್ಷ್ಣತೆಯನ್ನು ಹೆಚ್ಚಿಸುವ ಸಲುವಾಗಿ ಪತ್ರಿಕಾ ಮಾಧ್ಯಮವನ್ನು ಯಥೇಚ್ಚವಾಗಿ ಬಳಸಿಕೊಂಡಿದ್ದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದುದ್ದಕ್ಕೂ ಆಗಿನ ಪತ್ರಿಕೆಗಳು ಪ್ರದರ್ಶಿಸಿದ ಕೆಚ್ಚದೆ, ಅಪಾಯವೆಂದೂ ಗೊತ್ತಿದ್ದರೂ ಬ್ರಿಟಿಷರನ್ನು ಕಂಗೆಡಿಸಿದ್ದ ಪತ್ರಿಕೋದ್ಯಮಿಗಳ ಸಾಹಸ ಕಥನಗಳನ್ನು ಓದಿದರೆ ಇಂದಿಗೂ ಮೈ ಜುಮ್ಮೆನ್ನಿಸದಿರದು. 

“ಪ್ರಜಾಪ್ರಭುತ್ವ ಇಲ್ಲದೇ ಪತ್ರಿಕೆ ಉಳಿಯಬಲ್ಲದು ಆದರೆ ಪತ್ರಿಕೆಗಳಿಲ್ಲದೆ ಜನತಂತ್ರ ಉಳಿಯಲಾರದು ಎಂದು ಅಮೇರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿದ್ದ ಥಾಮಸ್ ಜೆಪರ್ಸನ್ ಹೇಳಿರುವದು ಪತ್ರಿಕೆಗಳ ಮಹತ್ವವನ್ನು ತಿಳಿಸದಿರದು. ಆ ಕಾರಣದಿಂದಲೇ ದೇಶ ಸ್ವಾತಂತ್ರ ಹೊಂದಿದ ನಂತರವೂ ಪತ್ರಿಕೆಗಳ ಪ್ರಾಮುಖ್ಯತೆ ಕಡಿಮೆ ಆಗಿಲ್ಲ. ಮಾಧ್ಯಮಗಳನ್ನು ಪ್ರಜಾಪ್ರಭುತ್ವದ ರಕ್ಷಕ, ಕಾವಲು ನಾಯಿ, ನಿರಂತರವಾಗಿ ಅಧಿವೇಶನ ನಡೆಸುತ್ತಿರುವ ಪ್ರಜೆಗಳ ಪಾರ್ಲಿಮೆಂಟ್ ಎಂದೂ ಹಲವಾರು ರೀತಿಯ ವಿಶೇಷಣೆಯೊಂದಿಗೆ ಕರೆಯಲಾಯಿತು. ಯಾವುದೇ ಪಕ್ಷದ ಸರಕಾರಗಳು ಅಧಿಕಾರದಲ್ಲಿದ್ದರು ದೇಶದ ಏಕತೆ, ಸಮಗ್ರತೆ, ದೇಶಪ್ರೇಮದ ಹಾಗೂ ಜನಸಾಮಾನ್ಯರ ಒಳಿತಿನ ವಿಷಯ ಬಂದಾಗ ಅವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಪತ್ರಿಕೆಗಳು ಮೊದಲಿನಿಂದಲೂ ಮಾಡುತ್ತಾ ಬಂದಿವೆ. ಇತ್ತೀಚಿನ ಉದಾಹರಣೆಯನ್ನೇ ತೆಗೆದು ಕೊಳ್ಳುವುದಾದರೆ ಭಾರತದ ಮಗ್ಗಲು ಮುಳ್ಳ್ಳಿನಂತಿರುವ ಚೀನಾ ದೇಶವು ಕುಯುಕ್ತಿಯಿಂದ ನಮ್ಮೊಂದಿಗೆ ಕಾಲುಕೆದರಿದಾಗ ಜನರಲ್ಲಿ ದೇಶಭಕ್ತಿಯ ಕಿಚ್ಚು ಹಚ್ಚಿ “ಚೀನಾ ವಸ್ತುಗಳನ್ನು ನಿರಾಕರಿಸುವ ಕೆಚ್ಚನ್ನು ಭಾರತೀಯರಲ್ಲಿ ಉತ್ಪನ್ನವಾಗುವಂತೆ ಮಾಧ್ಯಮಗಳು ಮಾಡಿಲ್ಲವೇ?. ಇದರಿಂದ ಚೀನಾದ ವ್ಯಾಪಾರೋದ್ಯಮದ ಮೇಲೆ ಅತಿಶಯವಾದ ಹೊಡೆತ ಬಿದ್ದು ಚೀನಾ ದೇಶವು ಇಂಗುತಿಂದ ಮಂಗನಂತೆ ತೆಪ್ಪಗಾಗ ಬೇಕಾಯಿತು. ಇಂತಹ ಹಲವಾರು ಉದಾಹರಣೆಗಳು ದೇಶದ ಇತಿಹಾಸದಲ್ಲಿ ದಾಖಲಾಗಿವೆ. ಹಲವಾರು ಪುರವಣಿಗಳ ಮೂಲಕ ದೇಶ, ವಿದೇಶದ ಸಂಗತಿಗಳನ್ನು, ಸಂಸ್ಕೃತಿ, ಜನಜೀವನಗಳನ್ನು ಜನರ ಮನೆ, ಮನದಂಗಣಕ್ಕೆ ಒಯ್ದು ಮುಟ್ಟಿಸುತ್ತಿವೆ. ನೆರೆ, ಭೂಕಂಪ, ಸುನಾಮಿ ಇತ್ಯಾದಿಗಳು ಅಪ್ಪಳಿಸಿ ಸಹಸ್ರಾರು ಜನ ಸತ್ತು, ಲಕ್ಷಗಟ್ಟಲೆ ಜನ ನಿರಾಶಿತ್ರರಾದಾಗ ಪತ್ರಿಕೆಗಳು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಸರಕಾರಕ್ಕೆ ಕೊಟ್ಟು ಮಾನವೀಯತೆ ಮೆರೆದಿವೆ. ಅಶಕ್ತ, ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಪತ್ರಿಕೆಗಳು ಸಹಾಯ ಮಾಡುತ್ತಿವೆ. 

ಮಾಧ್ಯಮವನ್ನು ಪ್ರಜಾಪ್ರಭುತ್ವದ ಚತುರ್ಥ ಸ್ತಂಭ ಎಂದು ವೈಭವೀಕರಿಸುವ ನಡುವೆಯೂ ಅಲ್ಲಲ್ಲಿ ಮುದ್ರಣ ಮಾಧ್ಯಮದ ಕುರಿತು ಅಪಸ್ವರಗಳೂ ಕೇಳಿ ಬರುತ್ತಿರುವುದು ಸುಳ್ಳಲ್ಲ. ಮಾಧ್ಯಮಗಳು ಪ್ರಜಾಪ್ರಭುತ್ವದ ಕಾವಲುಗಾರನ ಪಾತ್ರವನ್ನು ಸಕ್ರಿಯವಾಗಿ ವಹಿಸಬೇಕು ಎಂದು ಒತ್ತಾಯಿಸುವ ನಡುವೆಯೂ ಪಕ್ಷಪಾತವಿಲ್ಲದ, ನ್ಯಾಯಯುತ ಭಾವನೆ ಪತ್ರಿಕೋದ್ಯಮದ ಮುಖ್ಯ ಅಂಶವಾಗಿದೆ ಆದರೆ ಇಂದು ಅಂತಹ ನಿಸ್ವಾರ್ಥ ಭಾವನೆ ಕಾಣೆಯಾಗುತ್ತಿದೆ ಎಂಬ ಆರೋಪವು ಇದೆ. ಪೀತ ಪತ್ರಿಕೋದ್ಯಮದ ಹಣದಾಹವು ಕೆಲವೆಡೆ ಸದ್ದು ಮಾಡುತ್ತಿರುವುದು ಸುಳ್ಳಲ್ಲ. 

ಬಹುಶಃ ಇದಕ್ಕೆ ಮೂಲ ಕಾರಣ ಪತ್ರಿಕೋದ್ಯಮ ಇಂದು ಸೇವೆಯಾಗಿ ಮಾತ್ರ ಉಳಿದಿಲ್ಲ. ಉದ್ಯಮವಾಗಿಯೂ ಬೆಳೆದಿದೆ. ಮುದ್ರಣ ಯಂತ್ರ, ಕಟ್ಟಡ, ಪತ್ರಿಕೆಗಳ ಸಾಗಾಟ ಇತ್ಯಾದಿಗಳಿಗೆ ಕೋಟಿಗಟ್ಟಲೆ ರೂ. ಬಂಡವಾಳವನ್ನು ತೊಡಗಿಸಲಾಗಿದೆ. ಲಕ್ಷಗಟ್ಟಲೆ ವಿದ್ಯಾವಂತರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿವೆ. ಉದ್ಯೋಗಾವಕಾಶಗಳನ್ನು ಒದಗಿಸುವುದರೊಂದಿಗೆ ಅವರಿಗೆ ಸಂಬಳ, ಸೌಲಭ್ಯಗಳನ್ನೂ ನೀಡ ಬೇಕಾದಾಗ, ಹಾಕಿದ ಬಂಡವಾಳವನ್ನು ಲಾಭಾಂಶದೊಂದಿಗೆ ಹಿಂಪಡೆಯ ಬೇಕಾದಾಗ ಬಹುಶಃ ಇಂಥಹ ಅಲ್ಪಸ್ವಲ್ಪ ರಾಜಿ ಅನಿವಾರ್ಯವಾಗ ಬಹುದೇನೊ? ಹಾಗಂತ ಇದನ್ನು ಸರಿ ಎಂದು ಅನುಮೋದಿಸುವುದು ಸಹಿತ ತಪ್ಪಾಗುತ್ತದೆ. ಯಾಕೆಂದರೆ ಇಲ್ಲಿ ನಿಸರ್ಗ ನಿಯಮದ ಉಲ್ಲಂಘನೆಯ ಭೀತಿಯೂ ಇದೆ. ಆದರೂ ಇದನ್ನೇ ಭೂತಕನ್ನಡಿ ಹಿಡಿದು ನೋಡುವ ಬದಲು ಎಷ್ಟೋ ಸಲ ಜನಸಾಮಾನ್ಯರಿಗೆ ಶಾಸಕಾಂಗ ಮತ್ತು ಕಾರ್ಯಾಂಗಗಳು ನ್ಯಾಯ ಒದಗಿಸಲು ವಿಫಲವಾದಾಗ ಪತ್ರಿಕಾರಂಗ ನ್ಯಾಯಕ್ಕಾಗಿ ನಾಯಕತ್ವವನ್ನು ವಹಿಸಿಕೊಂಡಿರುವುದನ್ನು ಮರೆಯುವಂತಿಲ್ಲ. ಬೋಪರ್ಸ್ ಫಿರಂಗಿ ಅವ್ಯವಹಾರವನ್ನು ಬಯಲಿಗೆಳೆದಂತೆ ಹಲವಾರು ಸಲ ನ್ಯಾಯ ಸತ್ಯದ ಕೂಗು ಸಾಯದಂತೆ ಪತ್ರಿಕೆಗಳು ನೋಡಿಕೊಂಡಿವೆ. ಮುಂದೆಯೂ ಸಹ ಇದನ್ನು ನೋಡಿ ಕೊಳ್ಳುವ ಜವಾಬ್ದಾರಿ ಪತ್ರಿಕೆಗಳದ್ದೆ ಆಗಿರುತ್ತದೆ. 

“ಈಗ ಸಂಪಾದಕ ಪತ್ರಿಕೆ ನಡೆಸುತ್ತಿಲ್ಲ. ಅದನ್ನು ನಡೆಸುತ್ತಿರುವುದು ಮಾಲಿಕ ಇಲ್ಲವೆ ಮಾಲಿಕನ ಮಕ್ಕಳು. ಪತ್ರಿಕೆಗಳು ಎಷ್ಟು ಸಾಧ್ಯವೋ ಅಷ್ಟೂ ಸುದ್ದಿಯನ್ನು ತಮ್ಮ ಮುಖಪುಟದಲ್ಲಿ ತುರುಕಿ ಬಿಡುತ್ತವೆ. ಅದು ಮುಖಪುಟದಲ್ಲಿ ಪ್ರಕಟಪಡಿಸುವ ಜಾಹೀರಾತು ಲಭ್ಯವಿಲ್ಲದಿದ್ದರೆ ಮಾತ್ರ.'' ಖುಷ್ವಂತ್ ಸಿಂಗ್‌ರು ತಮ್ಮ ಪುಸ್ತಕ ’ಲೆಸನ್ಸ್ ಆಫ್ ಮೈ ಲೈಫ್’ನಲ್ಲಿ ಇಂದಿನ ಪತ್ರಿಕೋದ್ಯಮದ ಬಗ್ಗೆ ಬರೆದ ಈ ಅಭಿಪ್ರಾಯವನ್ನು ಬದಲಿಸಲು ಸಾಧ್ಯವಿಲ್ಲವೇ?

ತನ್ನ ಮೇಲಿರುವ ಪಕ್ಷಪಾತಿ ಎಂಬ ಆರೋಪವನ್ನು ಕೊಡವಿಕೊಂಡು ಮಾಧ್ಯಮರಂಗದ ದೈತ್ಯನಾಗಿ ಬೆಳೆಯುವ ಸಾಮರ್ಥ್ಯ ಈಗಲೂ ಭಾರತದ ಪತ್ರಿಕೋದ್ಯಮಕ್ಕೆ ಇದೆ. ಹೊರಗಿನ ಭವ್ಯತೆಯ ಬದಲು ಜನರ ನಾಡಿಮಿಡಿತ ಅರಿತುಕೊಳ್ಳುವ ಚಾಕಚಕ್ಯತೆಯನ್ನು ಪತ್ರಿಕೋದ್ಯಮ ಬೆಳೆಸಿಕೊಳ್ಳ ಬೇಕು. ರಾಜಕಾರಣಿಗಳನ್ನು, ಸೆಲೆಬ್ರೆಟಿಗಳನ್ನು ಎತ್ತಿ ಮುದ್ದಾಡುವ ಬದಲು ಸಾಮಾನ್ಯ ಜನರ ಸಾಧನೆ, ಪ್ರತಿಭೆ, ಸಂಸ್ಕೃತಿಯನ್ನು ಅನಾವರಣಗೊಳಿಸಲು ಪತ್ರಿಕೆಗಳು ಪ್ರಯತ್ನಿಸ ಬೇಕು. ಇತ್ತೀಚೆಗೆ ವಿದ್ಯಾವಂತರೇ ಪತ್ರಿಕೋದ್ಯಮಕ್ಕೆ ದೊಡ್ಡಸಂಖ್ಯೆಯಲ್ಲಿ ಬರುತ್ತಿದ್ದು ಉನ್ನತ ಶಿಕ್ಷಣದೊಂದಿಗೆ ಸಾಂಸ್ಕೃತಿಕ ಭವ್ಯತೆ, ಆದರ್ಶ, ಸಚ್ಚಾರಿತ್ಯ ಉಳ್ಳವರು ಅಧಿಕ ಸಂಖ್ಯೆಯಲ್ಲಿ ಈ ಕ್ಷೇತ್ರಕ್ಕೆ ಬರುವಂತೆ ಆಗಿ ಅವರು ಬರೆಯುವ ಮೊದಲು ಸೂಕ್ತ ಅಧ್ಯಯನವನ್ನೂ ಮಾಡಿಕೊಂಡರೆ ಬಹುಶಃ ಪತ್ರಿಕೋದ್ಯಮ ಇಂತಹ ಆರೋಪದಿಂದ ಮುಕ್ತವಾಗುವ ದಿನಗಳು ಬೇಗನೇ ಬರಬಹುದು. ಕೊನೆಯದಾಗಿ ಒಂದು ಮಾತಂತು ನಿಜ. ಸತ್ಯ, ನ್ಯಾಯವನ್ನು ಎತ್ತಿ ಹಿಡಿದು ದುರ್ಬಲರ, ಧ್ವನಿ ಸತ್ತವರ ಸಂರಕ್ಷಕನಾಗಬೇಕಾದ ಪತ್ರಿಕೋದ್ಯಮವು ಪಕ್ಷಪಾತಿಯಾಗಿ ಬದಲಾದರೆ ಜನರಿಗಂತೂ ಒಳಿತಿಲ್ಲ!



0 likes

Published By

Argodu Suresh Shenoy

argodusureshshenoy

Comments

Appreciate the author by telling what you feel about the post 💓

  • ARAVIND SHANBHAG, Baleri · 3 years ago last edited 3 years ago

    vistratavagi madhyamada aalavannu teredittiddiri. abhinandanegalu

Please Login or Create a free account to comment.