ಸಾಧನೆಯ ಸವಿ!

ವಿದ್ಯೆಯಲ್ಲಿ ಹಿಂದುಳಿದಿದ್ದರೂ ಛಲ ಮತ್ತು ಸಾಧನೆಯಿದ್ದರೆ 'ಮೇಡ್ ಇನ್ ಇಂಡಿಯಾ'ದ ರೋಲ್ ಮಾಡಲ್ ಆಗಬಹುದು ಎನ್ನುವುದನ್ನು ಈ ಕನ್ನಡ ಕಥೆಯು ನಮಗೆ ತಿಳಿಸಿ ಕೊಡುತ್ತದೆ.

Originally published in kn
Reactions 1
468
Argodu Suresh Shenoy
Argodu Suresh Shenoy 24 Aug, 2020 | 1 min read
Make in India V/s Made in India India Kannada Story

“ನೀವೆಲ್ಲ ಪದವಿ, ಸ್ನಾತಕೋತ್ತರ ಪದವಿ ಕಲಿತಿದ್ದೀರಿ. ಬಿ.ಇ. ಕಲಿತು ತಂತ್ರಜ್ಞರಾದವರು ಇಲ್ಲಿದ್ದೀರಿ. ಪ್ರತಿಭಾವಂತರಾಗಿದ್ದ ಕಾರಣದಿಂದಲೇ ಇಷ್ಟೆಲ್ಲ ಸಾಧನೆಗಳನ್ನು ಮಾಡಲು ನಿಮ್ಮಿಂದ ಸಾಧ್ಯವಾಗಿದೆ. ನೀವೀಗ ನಿಮ್ಮಲ್ಲಿರುವ ವಿಶೇಷ ಶಕ್ತಿಯನ್ನು ಅರಿತು ಕೊಳ್ಳಿ. ಸ್ವಂತ ಹಾಗೂ ಸ್ವತಂತ್ರವಾಗಿ ಏನಾದರೂ ಉದ್ಯಮ, ವ್ಯಾಪಾರವನ್ನು ಆರಂಭಿಸಿ. ನಿಮಗಿಂತ ದಡ್ಡರಾದವರು, ಮೆಟ್ರಿಕ್ ಪರೀಕ್ಷೆಯಲ್ಲಿ ಪಾಸಾಗಲಾರದ ಸೋಂಬೇರಿಗಳು ಬೇಕಾದಷ್ಟು ಜನ ಇದ್ದಾರೆ. ಅವರ ಕೈಗಳಿಗೆ ಕೆಲಸ ಕೊಡಿ. ಉದ್ಯಮ ಸ್ಥಾಪಿಸಲು ದೇಶದ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ನೀಡಲು ತುದಿ ಕಾಲ ಮೇಲೆ ನಿಂತಿವೆ. ಸರಕಾರಗಳು ತೆರಿಗೆಯಲ್ಲಿ ರಿಯಾಯಿತಿ ನೀಡುವುದಷ್ಟೇ ಅಲ್ಲದೆ ಸಬ್ಸಿಡಿಯನ್ನೂ ಕೊಡುತ್ತಿವೆ, ಕಡಿಮೆ ಬೆಲೆಯಲ್ಲಿ ಭೂಮಿಯನ್ನೂ, ವಿದ್ಯುತ್ ಅನ್ನು ಒದಗಿಸುತ್ತಿವೆ. ಬನ್ನಿ ಬನ್ನಿ ಯುವಜನರೇ ಮುಂದೆ ಬನ್ನಿ. ಮೇಕ್ ಇನ್ ಇಂಡಿಯಾ ಎನ್ನುವ ಈ ಆಂದೋಲನದಲ್ಲಿ ಪಾಲ್ಗೊಳ್ಳಿ. ನೀವೂ ಬೆಳೆಯಿರಿ, ದೇಶವನ್ನೂ ಬೆಳೆಸಿರಿ.” ಪದ್ಮವಿಭೂಷಣ ಪುರಸ್ಕೃತ ಪ್ರಖ್ಯಾತ ಪ್ರೊಪೆಸರ್ ಸತ್ಯನಾಥರು ವೇದಿಕೆಯ ಮೇಲೆ ನಿಂತು ತಮ್ಮ ಕಂಠಿನ ಕಂಠದಿಂದ ಯುವಕರಿಗೆ ಈ ರೀತಿಯ ಕರೆ ಕೊಟ್ಟರು. ಅವರು ‘ಮೇಕ್ ಇನ್ ಇಂಡಿಯಾದ’ ರಾಯಭಾರಿಗಳು. ಪ್ರತಿದಿವಸ ಇಂಥಹ ಎರಡು, ಮೂರು ಕಾರ್ಯಕ್ರಮದಲ್ಲಾದರೂ ಭಾಗವಹಿಸಿ ಮೇಕ್ ಇನ್ ಇಂಡಿಯಾದ ಮಹತ್ವವನ್ನು ವಿವರಿಸುವುದರೊಂದಿಗೆ ನೌಕರಿ ಗಿಟ್ಟಿಸಿಕೊಳ್ಳುವ ಕನಸಿನಲ್ಲಿದ್ದ ಯುವಜನರನ್ನು ಉದ್ಯಮ ಸ್ಥಾಪಿಸುವತ್ತ ಸಳೆಯಲು ಪ್ರಯತ್ನಿಸುತ್ತಿದ್ದರು. ಸರಕಾರದ ಯೋಜನೆಗಳನ್ನು, ನವ ಉದ್ಯಮಗಳಿಗೆ ಸಿಗುವ ಸೌಲಭ್ಯಗಳನ್ನು ಅವರೊಂದಿಗೆ ಬಂದಿರುವ ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಆಕರ್ಷಕವಾಗಿ ವಿವರಿಸುತ್ತಿದ್ದರು. 

ಹುಬ್ಬಳ್ಳಿಯಲ್ಲಿಯೂ ಸಹ ಜಿಲ್ಲಾ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ಹಾಗೂ ಉದ್ಯೋಗ ವಿನಿಮಯ ಕಛೇರಿಗಳ ಸಹಯೋಗದಲ್ಲಿ ಅಂತಹದ್ದೇ ಒಂದು ಸಭೆ ನಡೆದಿತ್ತು. ಉದ್ಯೋಗ ವಿನಿಮಯ ಕಛೇರಿ ತನ್ನಲ್ಲಿ ನೋಂದಾಯಿಸಿಕೊಂಡಿದ್ದ ನೂರಾರು ಯುವಕ, ಯುವತಿಯರನ್ನು ಸಭೆಗೆ ಆಹ್ವಾನಿಸಿತ್ತು. ಉದ್ಯೋಗ ಹಾಗೂ ಉದ್ಯಮ ಮಾರ್ಗದರ್ಶನ ಸಮಾವೇಶ ಎಂದು ಪ್ರಚಾರ ನೀಡಿ ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ತಿಳಿಸಿದ್ದರಿಂದ ಅಷ್ಟೊಂದು ಜನ ಯುವಕ-ಯುವತಿಯರು ಅಲ್ಲಿಗೆ ಬಂದಿದ್ದರು. ಎಲ್ಲರಲ್ಲೂ “ಏನಾದರೂ ನೌಕರಿ ಸಿಕ್ಕಿದರೆ ಸಾಕು ಉದ್ಯಮದ ಗೋಜಲು ನಮಗೇಕೆ ಬೇಕು?” ಎಂಬ ಭಾವವಿತ್ತು. 

“ನಮಸ್ತೆ ಸಾರ್....” ಕಾರ್ಯಕ್ರಮ ಮುಗಿಸಿ ಬೇರೆಡೆಗೆ ಹೊರಡಲು ಹೊರಟು ನಿಂತ ಪ್ರೊ|| ಸತ್ಯನಾಥರ ಮುಂದೆ ಬಂದ ವ್ಯಕ್ತಿ ಪರಿಚಿತನಂತೆ ಅವರನ್ನು ಮಾತನಾಡಿಸಿದಾಗ ಈ ಅಪರಿಚಿತ ಪರಿಸರದಲ್ಲಿ ನನ್ನ ಪರಿಚಯವಿದ್ದವರು ಯಾರೆಂದು ಸತ್ಯನಾಥರು ತಲೆ ಎತ್ತಿ ಒಮ್ಮೆ ಆತನನ್ನು ದಿಟ್ಟಿಸಿ ನೋಡಿದರು.

“ಯಾಕೆ ಸಾರ್ ಅಷ್ಟೊಂದು ದಿಟ್ಟಿಸಿ ನೊಡುತ್ತಿದ್ದೀರಿ ನನ್ನ ಪರಿಚಯ ಆಗಲಿಲ್ಲವೇ? ನಾನು ಹರಿ... ಹರೀಶ... ಎರಡು ವರ್ಷದ ಹಿಂದೆ ಎಂ.ಬಿ.ಎ.ದಲ್ಲಿ ತಮ್ಮ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್‍ಯಾಂಕ್ ಪಡೆದು ಕೊಂಡಿದ್ದೆ. ” ತನ್ನ ನೆಚ್ಚಿನ ಉಪನ್ಯಾಸಕರು ಇಷ್ಟು ಬೇಗ ತನ್ನನ್ನು ಮರೆತ ಬಗ್ಗೆ ಆಕ್ಷೇಪಿಸುವಂತೆ ಅಂದನು.

“ಹರಿ... ಹರೀಶ.... ಸಾರಿ... ಸಾರಿ... ನೀನು ಇಲ್ಲಿ ಆಕಸ್ಮಿಕವಾಗಿ ಸಿಗಬಹುದೆಂಬ ಕಲ್ಪನೆ ನನಗೆ ಇರಲಿಲ್ಲ.” ತಮ್ಮ ವರ್ತನೆಯ ಬಗ್ಗೆ ವಿಷಾಧಿಸುವಂತೆ ಹೇಳಿ “ಅಲ್ಲದೇ ಈಗ ನೀನು ಮೊದಲಿಗಿಂತ ತುಂಬಾ ದಪ್ಪವಾಗಿದ್ದಿಯಾ... ಇಷ್ಟ ಬೇಗ ತಲೆ ಕೂದಲಿಗೆ ಬಣ್ಣ ಬಳಿದುಕೊಳ್ಳಲು ಆರಂಭಿಸಿದ್ದೆಯಾ ಹೇಗೆ?” ತಾನು ಗುರುತಿಸದೇ ಇರಲು ಆತನ ಬದಲಾದ ರೂಪವು ಸಹ ಕಾರಣ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದರು. 

ಹರೀಶನಿಗೆ ಅದೇ ಚರ್ಚೆಯನ್ನು ಮತ್ತಷ್ಟು ಮುಂದುವರಿಸುವ ಇಚ್ಛೆ ಇರಲಿಲ್ಲ. “ಸಾರ್ ಇಂದು ಇಲ್ಲಿಯೇ ಇರುತ್ತಿರಲ್ಲವೇ? ನಮ್ಮ ಮನೆಗೊಮ್ಮೆ ಬಂದು ಹೋಗಬೇಕು.” ಮಾತನ್ನು ಬದಲಾಯಿಸಲು ಒತ್ತಾಯದ ಒಗ್ಗರಣೆಯೊಂದಿಗೆ ಅಂದನು.

“ಮನೆಗೇ...?”ಬಹುಶಃ ಬರಲಾಗದು ಅನ್ನುವಂತೆ ಅಡ್ಡಡ್ಡವಾಗಿ ತಲೆ ಆಡಿಸಿದ ಪ್ರೊಫೆಸರರು “ಅದು ಸರಿ ನೀನೇನು ಈ ಹೂಬಳ್ಳಿಯಲ್ಲಿ? ವಿಶ್ವವಿದ್ಯಾಲಯದ ಪದವಿ ಪ್ರಧಾನ ಸಮಾರಂಭಕ್ಕೆ ಬಂದಾಗ ಎಲ್ಲೋ ಕೆಲಸ ಸಿಕ್ಕಿದೆ ಎಂದ ಹಾಗಿತ್ತು.” ತಮ್ಮ ನೆನಪನ್ನು ಕೆದಕುವ ಪ್ರಯತ್ನ ಮಾಡಿದರು. 

“ನಿಜ ಸಾರ್... ನನಗೆ ಈ ಹುಬ್ಬಳ್ಳಿಯಲ್ಲಿಯೇ ಕೆಲಸ ಸಿಕ್ಕಿದ್ದು.... ಇಲ್ಲಿಂದ ಅರ್ಧ ಕಿಲೋಮೀಟರ ದೂರದಲ್ಲಿಯೇ ನಾನು ಕೆಲಸ ಮಾಡುವ ಫ್ಯಾಕ್ಟರಿ ಇದೆ. ಹತ್ತು ನಿಮಿಷ ಸಾಕು; ತುಂಬಾ ಉತ್ಸಾಹದ ನಮ್ಮ ಮಾಲಕರನ್ನು ನಿಮಗೊಮ್ಮೆ ಪರಿಚಯ ಮಾಡಬೇಕು. ಹಾಂ... ಅವರು ಪ್ರಧಾನಿಯವರ ಮೇಕ್ ಇನ್ ಇಂಡಿಯಾ ಘೋಷಣೆಯಿಂದ ಪ್ರಭಾವಿತರಾಗಿಯೇ ಮೆ| ಸುಪ್ರಭಾತ ಟೈಲ್ಸ್ ಎಂಬ ಟೈಲ್ಸ್ ಉದ್ಯಮವನ್ನು ಆರಂಭಿಸಿದ್ದಾರೆ.” ನೀವು ಅಲ್ಲಿಗೆ ಬಂದು ಹೋಗಲೇ ಬೇಕು” ಎಲ್ಲಿ ಬರಲಾಗದು ಎನ್ನುತ್ತಾರೊ ಎಂಬ ಆತಂಕದಿಂದ ಒತ್ತಾಯಪೂರ್ವಕವಾಗಿ ಹೇಳಿದ.

ಪ್ರಧಾನಿಯವರ “ಮೇಕ್ ಇನ್ ಇಂಡಿಯಾ”’ಘೋಷಣೆಯಿಂದ ಪ್ರಭಾವಿತನಾಗಿ ಒರ್ವ ಯುವಕ ಉದ್ಯಮ ಆರಂಭಿಸಿದ್ದಾನೆಂದರೆ ತಾನೊಮ್ಮೆ ಅದನ್ನು ನೋಡಲೇ ಬೇಕು. ಮುಂದಿನ ಉಪನ್ಯಾಸಗಳಲ್ಲಿ ಈ ವಿಷಯವನ್ನು ಹೇಳಿ ಯುವಜನರನ್ನು ಉತ್ತೇಜಿಸಲು ಸಾಧ್ಯವಿದೆ.’ ಹೀಗೆ ತೀರ್ಮಾನಿಸಿದ ಪ್ರೊ|| ಸತ್ಯನಾಥರು “ಹೆಚ್ಚೆಂದರೆ ಅರ್ಧ ಗಂಟೆಯೊಳಗೆ ನನ್ನ ಈ ಭೇಟಿ ಮುಗಿಯ ಬೇಕು...” ತುಂಬಾ ವಿಳಂಬವಾದರೆ ಮುಂದಿನ ಸಭೆಗೆ ಹೋಗಲು ವಿಳಂಬವಾಗಬಹುದು ಎಂಬ ಆತಂಕದಿಂದ ಅಂದರು.

“ಆಯುತು” ಎನ್ನುವಂತೆ ತಲೆಯಾಡಿಸಿ ಒಪ್ಪಿಗೆ ಸೂಚಿಸಿದ ಹರೀಶ “ಸಾರ್ ನಾನು ಬೈಕ್ ತಂದಿದ್ದೇನೆ; ನಿಮಗೊಂದು ಆಟೋರಿಕ್ಷಾ ತರುತ್ತೇನೆ” ಅಷ್ಟೊಂದು ಹೆಸರುವಾಸಿ ಪ್ರೊಪೆಸರರನ್ನು ತನ್ನ ಗಾಡಿಯ ಮೇಲೆ ಹೊಗೋಣ ಬನ್ನಿ ಎಂದು ಕರೆದರೆ ಅವರು ಅಪಮಾನ ಎಂದು ತಿಳಿದರೆ ಎಂಬ ಉಭಯಸಂಕಟದಿಂದ ಅಂದನು. 

“ಬೇಡ.. ಬೇಡ... ರಿಕ್ಷಾಗಿಕ್ಷಾ ಏನೂ ಬೇಡ ನನ್ನ ಕಾರಿದೆ... ಅದರಲ್ಲಿಯೇ ಹೋಗೋಣ... ನೀನು ಬೇಕಾದರೆ ಬೈಕನ್ನು ಇಲ್ಲಿಯೇ ಇಟ್ಟು ನನ್ನ ಕಾರಲ್ಲೆ ಬಾ..” ಆತನ ಉಭಯ ಸಂಕಟ ತಿಳಿದವರಂತೆ ತಾವೇ ಪರಿಹಾರ ಸೂಚಿಸಿದರು.

ಹರೀಶ ತನ್ನ ನೆಚ್ಚಿನ ಪ್ರೊಪೆಸರರನ್ನು ತನ್ನ ಫ್ಯಾಕ್ಟರಿಗೆ ಕರೆದುಕೊಂಡು ಬಂದ. ನೀನು ಪ್ರತಿಭಾವಂತ... ನೀನೂ ಇಂತಹದೇ ಒಂದು ಉದ್ಯಮ ಆರಂಭಿಸ ಬೇಕಾಗಿತ್ತು” ಕಾರಿಳಿದು ಶಿಷ್ಯನೊಂದಿಗೆ ಹೆಜ್ಜೆ ಹಾಕುತ್ತ ಪ್ರೊಪೆಸರ ಅಂದರು. ಅವರ ಮಾತುಗಳಲ್ಲಿ ಹರೀಶ ಬೇರೆಯವರ ಹತ್ತಿರ ಕೆಲಸ ಮಾಡುತ್ತಿರುವ ಬಗ್ಗೆ ಆಕ್ಷೇಪ ಇತ್ತು. 

“ಸ್ವಂತ ಉದ್ಯಮ ಸ್ಥಾಪಿಸುವುದಕ್ಕಿಂತ ನೌಕರಿ ಮಾಡುವುದೇ ಸುಖದಾಯಕ ಸಾರ್... ಉದ್ಯಮ ಸ್ಥಾಪಿಸುವುದೆಂದರೆ ಎಷ್ಟೊಂದು ಚಿಂತೆಗಳು... ನಷ್ಟಗಳು... ಕಷ್ಟಗಳು...” ಅವನ ಮಾತುಗಳಿಂದ ಪ್ರೊಪೆಸರರಿಗೆ ಇಂದಿನ ವಿದ್ಯಾವಂತ ಯುವಜನರ ಪ್ರತಿನಿಧಿ ಕಂಡುಬಂದ.

ಹರೀಶ ಪ್ರೊಪೆಸರರನ್ನು ಫ್ಯಾಕ್ಟರಿಯ ಎಲ್ಲೆಡೆ ಕರೆದುಕೊಂಡು ಹೋಗಿ ಪರಿಚಯಿಸಿದ. ಪ್ರೊಪೆಸರರು ಹಲವಾರು ವಿಷಯಗಳನ್ನು ಅವರ ಹತ್ತಿರ ಕೇಳಿ ತಿಳಿದುಕೊಂಡರು. ಅವರೆಲ್ಲರ ಶಿಕ್ಷಣ, ಅನುಭವವನ್ನೂ ಅರಿತು ಕೊಂಡರು. ಫ್ಯಾಕ್ಟರಿಯ ಮಾಲಕರ ಬಗ್ಗೆ ಕೇಳಿದಾಗ ಕೆಲವರಂತೂ ಅವರೊಬ್ಬು ಪ್ರತ್ಯಕ್ಷ ದೈವ ಎಂದು ಅಭಿಮಾನದಿಂದ ಅಂದಾಗ ಪ್ರೊಪೆಸರರಿಗೆ ಆ ಪುಣ್ಯಾತ್ಮನನ್ನು ತಾನು ಒಮ್ಮೆ ನೋಡ ಬೇಕೆನಿಸಿತು. 

ಅಷ್ಟರೊಳಗೆ ಅವರು ಹರೀಶನ ಛಂಬರಿಗೆ ಬಂದಿದ್ದರು. ಗುರುಗಳನ್ನು ತಾನು ಕುಳಿತು ಕೊಳ್ಳುವ ಆಸನದ ಮೇಲೆ ಕುಳ್ಳಿರಿಸಿದ ಹರೀಶ ತನ್ನ ಮೇಜಿನ ಮೇಲೆ ಮೊದಲೇ ತರಿಸಿ ಇಟ್ಟಿದ್ದ ತಾಜಾ ಗಂಧದ ಮಾಲೆ, ರೇಶ್ಮೆ ಶಾಲನ್ನು ಗುರುಗಳಿಗೆ ಅರ್ಪಿಸಿ ಧಾರವಾಡ ಪೇಡಾದ ಒಂದು ದೊಡ್ಡ ಬಾಕ್ಸನ್ನು ಅವರು ನಿರಾಕರಿಸುತ್ತಿದ್ದರೂ ಅವರಿಗೆ ನೀಡಿ ಜವಾನಿಗೆ ಸನ್ನೆ ಮಾಡಿದ. ಜವಾನ ತಾನು ಅದಾಗಷ್ಟೆ ಹೊಟೇಲಿನಿಂದ ತಂದಿದ್ದ ಬಿಸಿಬಿಸಿ ಮಿರ್ಚಿ, ಧಾರವಾಡ ಪೇಡಾವನ್ನು ಒಂದು ಪ್ಲೇಟಿನಲ್ಲಿಟ್ಟು ಪ್ರೊಪೆಸರರ ಮುಂದೆ ತಂದಿಟ್ಟ. ಅದರೊಂದಿಗೆ ಒಂದು ಕಪ್ ಚಾಹವನ್ನು ಸಹ....

ಮಿರ್ಚಿ, ಪೇಡಾವನ್ನು ನಿರಾಕರಿಸಿದ ಪ್ರೊಪೆಸರರು ಚಹಾವನ್ನಷ್ಟೇ ಕುಡಿದರು. ಅವರು ಚಹಾ ಕುಡಿದು ಮುಗಿಸುವುದರೊಳಗೆ ಜವಾನ ಬಂದು ಹರೀಶನ ಕಿವಿಯಲ್ಲಿ ಏನೋ ಉಸುರಿದ. “ಆಯಿತು” ಎನ್ನುವಂತೆ ತಲೆಯಾಡಿಸಿದ ಹರೀಶ “ಸಾರ್ ಬನ್ನಿ ನಮ್ಮ ಬಾಸ್ ಛಂಬರಿಗೆ ಹೋಗೋಣ. ಅವರು ಬಂದಂತಿದೆ”ಎಂದು ಪ್ರೊಪೆಸರರನ್ನು ಕರೆದುಕೊಂಡು ಫ್ಯಾಕ್ಟರಿಯ ಮಾಲಕರಾದ ಧನ್ಯರಾಜರ ಛೇಂಬರಿಗೆ ಹೋದನು. 

ಪ್ರೊಪಸರರಿಗೂ ಧನ್ಯರಾಜರನ್ನು ನೋಡುವ ಕುತೂಹಲ, ಅಭಿನಂದಿಸುವ ಆಶೆ ಇತ್ತು. ಇಬ್ಬರೂ ಧನ್ಯರಾಜರ ಛಂಬರಿಗೆ ಬಂದರು. ಅಲ್ಲಿದ್ದ ಮೂವತ್ತು, ಮೂವತ್ತೆರಡರ ಯುವಕನನ್ನೇ ತದೇಕಚಿತ್ತರಾಗಿ ನೋಡುತ್ತಾರೆ. ಧನ್ಯರಾಜರು “ಹೋ... ಬನ್ನಿ ಬನ್ನಿ ಸಾರ್... ಕುಳಿತುಕೊಳ್ಳಿ...” ಎಂದು ಧನ್ಯರಾಜನೂ ತನ್ನದೇ ಆಸನವನ್ನು ತೋರಿಸಿದಾಗ ಧನ್ಯರಾಜರ ನಮ್ರತೆಗೆ ಪ್ರೊಪಸರರು ಕರಗಿ ಹೋದರು. ಧನ್ಯರಾಜರ ನಮ್ರತೆಯನ್ನು ದುರುಪಯೋಗ ಪಡಿಸಿಕೊಳ್ಳುವುದು ತನಗೆ ಭೂಷಣವಲ್ಲ ಎಂದು ನಿರ್ಣಯಿಸಿ ಪ್ರೊಪೆಸರರು ಅವರೆದುರಿನ ಕುರ್ಚಿಯ ಮೇಲೆ ಕುಳಿತು ಕೊಳ್ಳಲು ಹೋದರು ಅಷ್ಟರೊಳಗೆ “ಯಾಕೆ ಸಾರ್ ಈ ಪೆದ್ದ ಶಿಷ್ಯನ ಪರಿಚಯ ಆಗಲಿಲ್ಲವೇ ಇನ್ನೂ...” ಕೋವಿಯಿಂದ ಹೊರಟ ಗುಂಡಿನಂತೆ ಧನ್ಯರಾಜರಿಂದ ಪ್ರಶ್ನೆ ತೂರಿ ಬಂದಾಗ ಪ್ರೊಪೆಸರ ಸತ್ಯನಾಥರು ಅವಾಕ್ಕಾಗಿ “ಯಾರಿರಬಹುದು” ಎಂದು ಪ್ರಶ್ನಾರ್ಥಕವಾಗಿ ಧನ್ಯರಾಜರನ್ನು ನೋಡುತೊಡಗಿದರು.

“ನೀವಾದರೂ ಹೇಗೆ ಗುರುತು ಹಿಡಿಯಬಲ್ಲಿರಿ ಬಿಡಿ ಸಾರ್... ಅಲ್ಲದೇ ನೀವು ನೆನಪಿನಲ್ಲಿ ಇಟ್ಟುಕೊಳ್ಳ ಬಹುದಾದ ಮನುಷ್ಯನೂ ನಾನಲ್ಲ...” ತನ್ನ ಬಗ್ಗೆ ಧನ್ಯರಾಜರು ತೀರಾ ನಿರ್ಲಕ್ಷದಿಂದ ಹೇಳಿದರು. 

“ನಿಮಗೆ ನನ್ನ ಪರಿಚಯ ಇದೆಯೇ?”ತನ್ನ ಪರಿಚಿತರ ಸಂಚಿಯಲ್ಲಿ ಈತನ ಮುಖ ಎಲ್ಲಾದರೂ ಕಾಣಿಸುತ್ತಿದೆಯೇ ಎಂದು ಪರಿಶೀಲಿಸುತ್ತಾ ಪ್ರೊಪೆಸರ ಅಂದರು. 

“ನಿಮ್ಮ ಪರಿಚಯ ಇಲ್ಲದೇ ಏನು ಸಾರ್... ನಾನು ನಿಮ್ಮ ಶಿಷ್ಯ... ನೀವು ಹನ್ನೆರಡು ವರ್ಷಗಳ ಹಿಂದೆ ಧಾರವಾಡದ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿ ಇರಲಿಲ್ಲವೇ ಆಗ ನಾನು ನಿಮ್ಮ ಶಿಷ್ಯನಾಗಿದ್ದೆ. ಅಂದಿನ ಅತ್ಯಂತ ಹೆಡ್ಡ ಶಿಷ್ಯರಲ್ಲಿ ನಾನೂ ಒಬ್ಬ... ಪದವಿಯ ಮೂರೂ ವರ್ಷಗಳಲ್ಲಿ ಅರ್ಧ ಸಬ್ಜೆಕ್ಟಗಳನ್ನು ಬರೆದು ಉತ್ತೀರ್ಣನಾಗಲೂ ಸಹ ನನ್ನಿಂದ ಸಾಧ್ಯವಾಗಲಿಲ್ಲ.” ಸ್ವಗತವೆನ್ನುವಂತೆ ಸ್ವರ ಇಳಿಸಿ ಇಷ್ಟನ್ನು ಹೇಳಿದ ಧನ್ಯರಾಜ “ಸಾರ್ ನಿಮಗೆ ಇನ್ನೂ ನನ್ನ ಪರಿಚಯವಾಗಲಿಲ್ಲವ?” ಪ್ರೊ| ಸತ್ಯನಾಥರ ಮುಖವನ್ನೇ ತದೇಕಚಿತ್ತನಾಗಿ ನೋಡುತ್ತಾ ಪ್ರಶ್ನಾರ್ಥಕವಾಗಿ ಕೇಳಿದ. 

ಇಲ್ಲವೆನ್ನುವಂತೆ ಆಡ್ಡಡ್ಡ ತಲೆಯಾಡಿಸಿದ ಪ್ರೊಪೆಸರರು “ಧನ್ಯ.... ದರಿದ್ರ...” ಏನನ್ನೊ ಗುಣಗುಣಿಸುತ್ತಾ ಸ್ವಗತವಾಗಿ ಹೇಳಿದರೂ ಆ ಶಬ್ಧಗಳು ಧನ್ಯರಾಜರಿಗೆ ಕೇಳಿಸಿದವು.

“ಹೌದು ಸಾರ್ ಆಗ ನೀವು ನನ್ನನ್ನು ದರಿದ್ರಧನ್ಯ ಎಂದೇ ಕರೆಯುತ್ತಿದ್ದೀರಿ... ಪ್ರೊಪೆಸರರ ಸ್ಮರಣೆಯಲ್ಲಿ ತಾನಿನ್ನು ಉಳಿದಿದ್ದೇನೆಂಬ ಸಂಭ್ರಮದಿಂದ ಧನ್ಯರಾಜ ಅಂದನು. ಆದರೆ ಪ್ರೊ| ಸತ್ಯನಾಥರಿಗೆ ಅದೊಂದು ಮುಜುಗರದ ಸಂದರ್ಭ. ತಾನು ಅಪ್ರಯೋಜಕನೆಂದು, ದಂಡ-ಪಿಂಡವೆಂದು ಹಂಗಿಸುತ್ತಿದ್ದ ಯುವಕನೊಬ್ಬ ಏರಿದ ಎತ್ತರ ನೋಡಿದಾಗ ತಮ್ಮ ಪಾಂಡಿತ್ಯಕ್ಕೆ ಗ್ರಹಣ ಹಿಡಿಯಿತೇ ಎಂಬ ಸಂಶಯ ಅವರಿಗೆ ಬಂದಿತು. “ ಕಾಲೇಜಿನಲ್ಲಿ ರ್‍ಯಾಂಕ್ ಪಡೆದವರು, ಡಿಸ್ಟೇಂಶನ್ ಪಡೆದ ಬುದ್ಧಿವಂತರು ಮಾತ್ರ ಜೀವನದಲ್ಲಿ ಏನಾದರೂ ಸಾಧನೆ ಮಾಡುತ್ತಾರೆ” ಎಂಬ ತಮ್ಮ ನಂಬಿಕೆ ಸುಳ್ಳಾದಾಗ ಶಿಷ್ಯನ ಮುಂದೆ ತಾನು ಕುಬ್ಜನಾದೆ ಎಂದು ಅವರು ಪಶ್ಚಾತ್ತಾಪ ಪಡಬೇಕಾಗಿತ್ತು. ಆದರೆ ಪ್ರೊಪೆಸರ್ ಸತ್ಯನಾಥರು ತುಂಬಿದ ಕೊಡ; ತನಗೆ ಅದೊಂದು ಹೆಮ್ಮೆ ಎನ್ನುವಂತೆ ಸ್ವಲ್ಪ ಮೊದಲು ಹರೀಶನು ತನ್ನನ್ನು ಗೌರವಿಸಲು ಕೊಟ್ಟ ಗಂಧದ ಮಾಲೆ, ರೇಷ್ಮೆಶಾಲು ಅದರೊಂದಿಗೆ ಸಮಾವೇಶದಲ್ಲಿ ಅದರ ನೆನಪಿಗಾಗಿ ಸಂಘಟಕರು ಕೊಟ್ಟ ಗಾಜಿನ ಪೆಟ್ಟಿಗೆಯಲ್ಲದ್ದ ರಾಧಾ-ಕೃಷ್ಣರ ಗಂಧದ ಮೂರ್ತಿಯನ್ನು ತಮ್ಮ ಕಾರಿನಿಂದ ತರಿಸಿ ಧನ್ಯನಾಥರಿಗೆ ಒತ್ತಾಯಪೂರ್ವಕವಾಗಿ ಅರ್ಪಿಸಿದರು. ಹಾಗೂ ಆತನನ್ನು ಅಪ್ಪಿಕೊಂಡು “ಪ್ರತಿಭೆಗಿಂತ ಸಾಧನೆಯೇ ದೊಡ್ಡ ಶಕ್ತಿ ಅನ್ನುವುದನ್ನು ನಾನಿಂದು ತಿಳಿದುಕೊಂಡೆ. ಸಾಧಿಸ ಬೇಕೆಂಬ ತುಡಿತ ಇರುವ ಎಲ್ಲರೂ ನಿನ್ನಂತೆ ಯಶಸ್ಸನ್ನು ಗಳಿಸ ಬಹುದು. ನಾನು ಯುವಜನರಿಗೆ ಮೇಕ್ ಇನ್ ಇಂಡಿಯಾಕ್ಕೆ ಕರೆ ಕೊಡಲು ಬಂದೆ ಆದರೆ ನೀನು ಮೇಡ್ ಫಾರ್ ಇಂಡಿಯಾಕ್ಕೆ ದೊಡ್ಡ ಮಾದರಿ” ಪ್ರೊಪೆಸರ್ ಸತ್ಯನಾಥ ಹೃದಯತುಂಬಿ ಅಂದರು.

ಹಾಗೂ ಅಲ್ಲಿ ನೆರೆದಿದ್ದ ಕಛೇರಿಯ ಉಳಿದ ಸಿಬ್ಭಂದಿ ಸಂಭ್ರಮದೊಂದಿಗೆ ಹೊಡೆಯುತ್ತಿದ್ದ ಚಪ್ಪಾಳೆಯ ಶಬ್ಧದೊಳಗೆ ತಮ್ಮ ಕೈ ಚಪ್ಪಾಳೆಯನ್ನೂ ಸೇರಿಸಿ ಧನ್ಯರಾಜನನ್ನು ಅಭಿನಂದಿಸಿದರು. ***




1 likes

Published By

Argodu Suresh Shenoy

argodusureshshenoy

Comments

Appreciate the author by telling what you feel about the post 💓

Please Login or Create a free account to comment.