ಕರೋನಾದ ವಿರುದ್ಧ ಗೆಲ್ಲೋಣ

ಕರೋನವನ್ನು ಗೆಲ್ಲಬೇಕಲ್ಲವೇ?

Originally published in kn
Reactions 0
392
Argodu Suresh Shenoy
Argodu Suresh Shenoy 11 May, 2021 | 1 min read
Corona

ಕರೋನಾದ ಮುಂದೆ ಎಲ್ಲರೂ ಸೋತಿದ್ದಾರೆ, ಎಲ್ಲವೂ ಸೋತಿವೆ. ಆದರೂ ಗೆದ್ದವರಿದ್ದಾರೆ. ಕಾಳಸಂತೆಕೋರರು, ಮಾನವತೆ ಮರೆತವರು, ಭೃಷ್ಟರು ವಿತ್ತ ವ್ಯಾಮೋಹಿಗಳಾಗಿ ಚಿತೆಯ ಬೆಂಕಿಯಲ್ಲಿ ಬೀಡಿ ಹಚ್ಚಿ ಕೊಂಡವರಂತೆ ಕರೋನದ ಅಟ್ಟಹಾಸದ ನಡುವೆಯೂ ತಮ್ಮ ಹಣದ ಚೀಲವನ್ನು ಹಿಗ್ಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ದೇಶದ ತಮ್ಮ ಸಹೋದರರು ಕುಡಿಯುವ ನೀರಿಗಾಗಿ, ಉಸಿರಾಡುವ ಪ್ರಾಣವಾಯುವಿಗಾಗಿ, ಆಹಾರ ವಸ್ತುಗಳಿಗಾಗಿ ಒದ್ದಾಡುತ್ತಿರುವಾಗ ಇವರೆಲ್ಲರಿಗೂ ದುಡ್ಡು ಗಳಿಸುವ ಕಾಯಕದಲ್ಲಿಯೇ ಮಗ್ನರಾಗಿದ್ದಾರೆ. ಬಹುಶಃ ಇವರನ್ನು ಕಂಡು ಕರೋನ ಸಹ ದಂಗಾಗಿರಬೇಕು.

ಸಂಕಷ್ಟ, ದುಃಖಗಳು ತನಗೇ ಬಂದಾಗ ಮಾತ್ರ ಅನುಭವವಲ್ಲ. ಇನ್ನೊಬ್ಬರಿಗೆ ಬಂದಾಗ ಅವರು ಅನುಭವಿಸಿರುವ ಕಷ್ಟ, ದುಃಖಗಳನ್ನು ಅರಿತುಕೊಂಡು, ಕನಿಕರಿಸಿದರೆ ಅದೂ ಅನುಭವವೇ! ಅಂತಹ ಸಂಕಷ್ಟ ತನಗೆ ಬಾರದಂತೆ ಮುಂಜಾಗ್ರತೆಯನ್ನು ವಹಿಸಬಹುದು. ದೇಶಾದ್ಯಂತ ಪ್ರತಿದಿನ ಲಕ್ಷಗಟ್ಟಲೆ ಜನ ಕರೋನಾ ಸೋಂಕಿತರಾಗುತ್ತಿದ್ದರೆ, ಸಹಸ್ರಾರು ಜನ ಸಾವಿನ ಮನೆಯತ್ತ ಮುಖಮಾಡುತ್ತಿದ್ದಾರೆ. ಒಬ್ಬ ವ್ಯಕ್ತಿಯ ಮರಣವೂ ಆಯಾಯ ಕುಟುಂಬಕ್ಕೆ ತುಂಬಿಬಾರದಷ್ಟು ನಷ್ಟವನ್ನು ಉಂಟುಮಾಡುತ್ತಿದೆ. ಪ್ರತಿ ದಿವಸ ಸಾಯುವ ಸಹಸ್ರಾರು ಸಾವುಗಳಿಂದ ಅದೆಷ್ಟೋ ಮಕ್ಕಳು, ಮಹಿಳೆಯರು ಅನಾಥರಾಗುತ್ತಿದ್ದಾರೆ. ತುಂಟ ಎತ್ತಿಗೆ ಬುದ್ಧಿ ಕಲಿಸಲು ಅದರ ಕುತ್ತಿಗೆಗೆ ಬಾರವಾದ ಕಟ್ಟಿಗೆಯ ತುಂಡನ್ನು ಕಟ್ಟುವಂತೆ ಕರೋನಾ ಸೋಂಕಿನ ಸರಪಳಿಯನ್ನು ಕತ್ತರಿಸಲು `ಲಾಕ್ ಡೌನ್'' ಅಸ್ತ್ರವನ್ನು ಬಳಸಲಾಗುತ್ತಿದೆ. ಇದರಿಂದಲೂ ದುಡಿಯುವ ಕೋಟಿಗಟ್ಟಲೆ ಕೈಗಳನ್ನು ಕಟ್ಟಿಹಾಕಿದಂತಾಗಿದೆ. ಅವರು ತಮ್ಮ, ಕುಟುಂಬದ ತುತ್ತಿನ ಚೀಲಗಳನ್ನು ತುಂಬಿಸಿಕೊಳ್ಳಲು ಒದ್ದಾಡುವಂತಾಗಿದೆ. ಹತಾಶೆಯ ಕೂಪದಲ್ಲಿ ಬೇಯಬೇಕಾಗಿದೆ.

ಇವೆಲ್ಲವುಗಳಿಗೆ ಬ್ರೇಕ್ ಹಾಕಬೇಕೆಂದರೆ ಮೊದಲಿಗೆ ನಾವು ``ಕರೋನ'ದ ಸರಪಳಿಯನ್ನು ಕತ್ತರಿಸ ಬೇಕಾಗಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕಾಗಿ ಲಾಕ್ ಡೌನ್ ಯಶಸ್ವಿಗೊಳಿಸಲು ಸರ್ವರೂ ಪೂರ್ತಿ ಮನಸ್ಸಿನಿಂದ ಕೈಜೋಡಿಸ ಬೇಕು. ನಾವು ಲಾಕ್ ಡೌನ್ ನಿಯಮವನ್ನು ಮುರಿಯುತ್ತಾ ಹೋದಂತೆ ಕರೋನದ ಸರಪಳಿ ವೃದ್ಧಿಸುತ್ತಾ ಹೋಗುತ್ತದೆ. ಸೋಂಕಿತರು, ಸಾಯುವವರು ಹೆಚ್ಚಾಗುತ್ತಾರೆ. ಸಹಜವಾಗಿ ಲಾಕ್ ಡೌನ್ ಮುಂದುವರಿಯುತ್ತಾ ಹೋಗುತ್ತದೆ. ಕಾಳಸಂತೆಕೋರರ ದೆಶೆಯಿಂದ ಜೀವನಾವಶ್ಯಕ ವಸ್ತುಗಳು, ತರಕಾರಿಗಳ ಬೆಲೆ ಹೆಚ್ಚಾಗುತ್ತಾ ಹೋಗುತ್ತದೆ. ಸಿಗದಂತಹ ಪರಿಸ್ಥಿತಿಯೂ ಬರ ಬಹುದು. ದುಡಿಮೆ ಇಲ್ಲದೇ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸೊರಗುತ್ತದೆ. ಆ ಕಾರಣದಿಂದ ಲಾಕ್ ಡೌನ್ ಯಶಸ್ವಿಗೊಳಿಸಲು ಈ ದೇಶದ ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸ ಬೇಕು. ಜೀವನಾವಶ್ಯಕ ವಸ್ತುಗಳನ್ನು ಪ್ರತಿ ದಿವಸ ತರುವ ಅಭ್ಯಾಸ ಬಿಡೋಣ, ವಾರಕ್ಕೊಮ್ಮೆತರುವ ಅಭ್ಯಾಸ ಬೆಳಸಿಕೊಳ್ಳೋಣ. ಮನೆಬಿಟ್ಟು ಅನಗತ್ಯವಾಗಿ ಹೊರಗೆ ತಿರುಗಾಡುವುದನ್ನು ಬಿಡೋಣ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯದಿರೋಣ. ಎಲ್ಲರೂ ತಪ್ಪದೇ ಎರಡೆರಡು ಸಲ ಕರೋನಾ ಲಸಿಕೆಯನ್ನು ಪಡೆದುಕೊಳ್ಳೋಣ. ಮನೆಯಲ್ಲಿ ತಯಾರಿಸಿದ ಆಹಾರವನ್ನೇ ಉಣ್ಣೋಣ. ಯೋಗಾಸನ, ಪ್ರಾಣಾಯಾಮಗಳನ್ನು ಮಾಡುತ್ತಲಿದ್ದು ಕರೋನಾದ ವಿರುದ್ಧ ನಾವು ಗೆಲ್ಲೋಣ.


0 likes

Published By

Argodu Suresh Shenoy

argodusureshshenoy

Comments

Appreciate the author by telling what you feel about the post 💓

Please Login or Create a free account to comment.