ಅತ್ಯಾಚಾರದಂತಹ ಹೇಯ ಕೃತ್ಯಕ್ಕೆ ಕ್ಷಮೆ ಬೇಡವೇ ಬೇಡ

ಒಟ್ಟಾರೆಯಾಗಿ ಹೆಣ್ಣು ಗಂಡಿನ ಅರ್ಧಾಂಗಿಯಷ್ಟೇ ಅಲ್ಲ ಈ ಪ್ರಕೃತಿಯಲ್ಲಿನ ಸರ್ವ ಜಡ, ಚೇತನಗಳ ಅರ್ಧ ಹಕ್ಕುದಾರಳು ಆಗಿದ್ದಾಳೆ. ತಾನು ಶಕ್ತಿವಂತ ಎನ್ನುವ ಕಾರಣದಿಂದ ಪುರುಷ ಜೀವಿ ಆಕೆಯ ಮೇಲೆ ಅತ್ಯಾಚಾರದಂತಹ ಹೇಯ ಕೃತ್ಯಕಿಳಿಯುವುದು ಎಂದೆಂದೂ ಕ್ಷಮಾರ್ಹವಲ್ಲ. ಅಬಾಲ ವೃದ್ಧರಾದಿಯಾಗಿ ಯಾರೇ ಇಂಥಹ ಹೀನ ಕೃತ್ಯ ಎಸಗಿದರೂ ಅವರು ಕಠಿಣ ಶಿಕ್ಷೆಯಿಂದ ಪಾರಾಗದಂತೆ ನೋಡುಕೊಳ್ಳುವುದು ಸಮಾಜದ ಕರ್ತವ್ಯವಾಗಿದೆ.

Originally published in kn
Reactions 1
503
Argodu Suresh Shenoy
Argodu Suresh Shenoy 12 Oct, 2020 | 1 min read
Rape

ಮನೆಮನೆಯಲಿ ದೀಪ ಮುಡಿಸಿ

ಹೊತ್ತು ಹೊತ್ತಿಗೆ ಅನ್ನ ಉಣಿಸಿ

ತಂದೆ ಮಗುವ ತಬ್ಬಿದಾಕೆ

ನಿನಗೆ ಬೇರೆ ಹೆಸರು ಬೇಕೆ

ಸ್ತ್ರೀ ಅಂದರೆ ಅಷ್ಟೆ ಸಾಕೆ  

ಇದು ಪ್ರಸಿದ್ಧ ಕವಿ ಜಿ.ಎಸ್.ಶಿವರುದ್ರಪ್ಪ ಅವರು ಬರೆದ ಕವನದ ಒಂದು ಚರಣ. 

***

ಹೆಣ್ಣಿಂದಲೇ ಇಹವು ಹೆಣ್ಣಿಂದಲೇ ಪರವು

ಹೆಣ್ಣಿಂದಲೇ ಸಕಲ ಸಂಪದವು ಹೆಣ್ಣೊಲ್ಲ ದಣ್ಣಗಳು ಯಾರು ಸರ್ವಜ್ಞ... ಇದು ಸರ್ವಜ್ಞ ಕವಿ ಮಹಿಳೆಯರ ಬಗ್ಗೆ ತೋರಿದ ಆದರ-ಗೌರವದ ನುಡಿಗಳು. 

***

ಮನುಸ್ಮೃತಿಯಲ್ಲಿಯೂ ಸಹ ಮನು ಮಹರ್ಷಿಯು ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವರು ನೆಲೆಸಿರುತ್ತಾರೆ. (ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಃ) ಎಂದು ಸ್ತ್ರೀಕುಲದ ಬಗ್ಗೆ ಪೂಜ್ಯತೆಯನ್ನು ತೋರಿದ್ದಾರೆ. ಸ್ತ್ರೀಯರ ಬಗ್ಗೆ ಪೂಜ್ಯತೆಯನ್ನು ಉಂಟುಮಾಡಲು ವಿವೇಕಿಗಳಿಗೆ ಈ ಮಾತುಗಳೇ ಸಾಕಲ್ಲವೇ? ಅಲ್ಲದೇ ಹಿಂದೂಸ್ಥಾನದ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳಲ್ಲೂ ಸ್ತ್ರೀ ದೌರ್ಜನ್ಯ ಎಸಗಿದ ರಾವಣ, ದುರ್ಯೋದನ ಹಾಗೂ ಅವರ ಪರ ವಹಿಸಿದವರನ್ನು ದುಷ್ಟರು, ರಾಕ್ಷಸು ಎಂದು ಕರೆಯಲಾಗಿದೆ. ರಾಮ-ರಾವಣರ ಮಧ್ಯೆ ನಡೆದ ಯುದ್ಧವಾಗಲೀ, ಕುರುಕ್ಷೇತ್ರದಲ್ಲಿ ಪಾಂಡವ-ಕೌರವರ ನಡುವಿನ ಯುದ್ಧಗಳು ಸ್ತ್ರೀಯರ (ಸೀತೆ, ದ್ರೌಪದಿ) ಮೇಲಿನ ದೌರ್ಜನ್ಯದ ಪ್ರತಿಕಾರ ಎಂದರೆ ತಪ್ಪಾಗಲಾರದು. 

ಹೆಣ್ಣು ತಾಯಿಯಾಗಿ, ಸಹೋದರಿಯಾಗಿ, ಮಡದಿಯಾಗಿ, ಶಿಕ್ಷಕಿಯಾಗಿ, ಸೊಸೆಯಾಗಿ, ಮನೆಯ ಒಳಗೆ ಹಾಗೂ ಹೊರಗೆ ಇಕ್ಕಡೆಗಳಲ್ಲೂ ದುಡಿಯುತ್ತಾ ಪುರುಷನ ಬೆನೆನ್ನಲುಬಾಗಿ ನಿಂತಿದ್ದಾಳೆ. ಒಂದು ಸಮೀಕ್ಷೆಯ ಪ್ರಕಾರ ಜಗತ್ತಿನಾದ್ಯಂತದ ಮಹಿಳೆಯರು ವೇತನ ಅಥವಾ ಮಾನ್ಯತೆ ಇಲ್ಲದ (ಕುಟುಂಬದ ಕಾಳಜಿ ಹಾಗೂ ಮನೆಕೆಲಸ) ೧೨೫೦ ಕೋಟಿ ಗಂಟೆಗಳ ಕೆಲಸವನ್ನು, ಕಾಳಜಯನ್ನು ತನ್ನ ಗಂಡ ಮತ್ತು ಕುಟುಂಬಕ್ಕಾಗಿ ಮಾಡುತ್ತಿದ್ದಾರಂತೆ. ಪ್ರತಿ ವರ್ಷ ಇದರಿಂದ ಜಾಗತಿಕ ಆರ್ಥಿಕತೆಗೆ ೭೬೦ ಲಕ್ಷ ಕೋಟಿ ರೂಪಾಯಿಗಳಷ್ಟು (ಹತ್ತಿರ ಹತ್ತಿರ ಹನ್ನೊಂದು ಟ್ರಿಲಿಯನ್ ಡಾಲರ್) ಮೌಲ್ಯದ ದೇಣಿಗೆ ಸಂದಂತಾಗುತ್ತದಂತೆ. ತಂತ್ರಜ್ಞಾನ ಉದ್ದಿಮೆಯು ಜಾಗತಿಕ ಆರ್ಥಿಕತೆಗೆ ನೀಡುವ ದೇಣಿಗೆಗಿಂತ ಇದು ಮೂರು ಪಟ್ಟು ಅಧಿಕ!

ವಿಶ್ವದ ಅತ್ಯಂತ ದೊಡ್ಡ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರವೂ ಸಹ ಒಂದು. ಹದಿನಾಲ್ಕು ವರ್ಷದೊಳಗಿನ ಎಲ್ಲರಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಭಾರತದಲ್ಲಂತೂ ಶಿಕ್ಷಣಕ್ಕೆ ಅತಿಶಯವಾದ ಮಹತ್ವ ನೀಡಲಾಗಿದೆ. ಒಂದು ಅಂದಾಜಿನ ಪ್ರಕಾರ ಭಾರತ ದೇಶದಲ್ಲಿ ೮೦ ಲಕ್ಷಕ್ಕಿಂತ ಅಧಿಕ ಸಂಖ್ಯೆಯ ಶಿಕ್ಷಕ -ಶಿಕ್ಷಕಿಯರು ಪ್ರಾಥಮಿಕ ಶಾಲೆಗಳಲ್ಲಿ ಬೋಧೀಸುತ್ತಿದ್ದಾರೆ. ಇವರಲ್ಲಿ ಶೇಕಡಾ ೫೫(%) ಶಿಕ್ಷಕಿಯರೇ ಇದ್ದಾರೆ. ಮನೆಯಲ್ಲಿ ತಾಯಿಯಾಗಿ, ಶಾಲೆಯಲ್ಲಿ ಶಿಕ್ಷಕಿಯಾಗಿ ಹೆಣ್ಣು ಮುನ್ನೆಡೆಸುತ್ತಿದ್ದರೂ ವಿಶ್ವದೆಲ್ಲೆಡೆ ಸ್ತ್ರೀ ಕುಲದ ಮೇಲೆ ಪುರುಷ ಕುಲವು ನಡೆಸುತ್ತಿರುವ ದೌರ್ಜನ್ಯವು ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ನಡೆದಿದೆ. ಒಂದು ಅಂದಾಜಿನಂತೆ ಭಾರತದಲ್ಲಿ ಪ್ರತಿವರ್ಷ ಮೂರುವರೆಯಿಂದ ನಾಲ್ಕು ಲಕ್ಷ ಮಹಿಳಾ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತವೆ. ಅವುಗಳಲ್ಲಿ ಶೇಕಡಾ ಹತ್ತರಷ್ಟು ಪ್ರಕರಣಗಳು ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳೇ ಆಗಿವೆ ಅನ್ನುವ ಸಂಗತಿಯು ಸರ್ವರನ್ನೂ ಬೆಚ್ಚಿ ಬೀಳಿಸುತ್ತದೆ. 

ಭಾರತೀಯ ಸಂವಿಧಾನವು ಈ ದೇಶದ ಪ್ರತಿಯೋರ್ವ ಮಹಿಳೆಗೂ ಸಮಾನತೆ (ಅನುಚ್ಛೇದ ೧೪) ರಾಜ್ಯದಿಂದ ತಾರತಮ್ಯ ಮಾಡಕೂಡದು (ಅನುಚ್ಛೇದ-೩೯) ಸಮಾನ ಅವಕಾಶ (ಅನುಚ್ಛೇದ-೩೯ಡಿ) ಇತ್ಯಾದಿಗಳನ್ನು ಖಾತ್ರಿಗೊಳಿಸಿದೆ. ಹೆಣ್ಣಿನ ಶಾರೀರಿಕ ಸೂಕ್ಷ್ಮತೆ, ದೈಹಿಕ ರಚನೆ, ಋತುಚಕ್ರ ಮೊದಲಾದವುಗಳನ್ನು ಪರಿಗಣಿಸಿ ಆಕೆಗೆ ಕೆಲವು ವಿಶೇಷ ಸವಲತ್ತುಗಳನ್ನೂ ನೀಡಿದೆ. ಮಹಿಳಾ ದೌರ್ಜನ್ಯ ತಡೆ ಕಾಯಿದೆ ಅವುಗಳಲ್ಲಿ ಪ್ರಮುಖ ವಾಗಿದೆ. ಅವುಗಳಲ್ಲಿ ಅತ್ಯಾಚಾರ ಪ್ರಕರಣ ಸಾಭೀತಾದರೆ ಭಾರತೀಯ ದಂಡಸಂಹಿತೆಯ ಪ್ರಕಾರ ಅತ್ಯಂತ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ. ಕ್ರಿಮಿನಲ್ ಲಾ ಆಕ್ಟ್ -೨೦೧೮ ಅತ್ಯಾಚಾರಿಗಳಿಗೆ ವಿಧಿಸುವ ಶಿಕ್ಷಯನ್ನು ಏಳು ವರ್ಷದಿಂದ ಜೀವಾವಧಿ ಶಿಕ್ಷೆಗೆ ಹೆಚ್ಚಿಸಿದೆ. ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತ ಹುಡುಗಿಯರ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲು ಸಹ ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗಿದೆ. 

ಎನ್.ಸಿ.ಆರ್.ಬಿ. (ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ)ದ ೨೦೧೯ರ ವಾರ್ಷಿಕ ವರದಿಯಂತೆ ದೇಶಾದ್ಯಂತ ೨೦೧೯ರಲ್ಲಿ ದಾಖಲೆಯಾದ ಮಹಿಳೆಯರ ಮೇಲಿನ ಅಪರಾಧದ ೪.೦೫ ಲಕ್ಷ ಪ್ರಕರಣಗಳಲ್ಲಿ ೩೨೦೩೩ ಅತ್ಯಾಚಾರ ಪ್ರಕರಣಗಳೇ ಆಗಿವೆಯಂತೆ. ಇವುಗಳಲ್ಲಿ ಶೇಕಡಾ ೯೪.೨ (%) ರಷ್ಟು ಪ್ರಕರಣಗಳಲ್ಲಿ ಪರಿಚಿತರೇ ಅತ್ಯಾಚಾರ ಎಸಗಿರುವುದು ಮತ್ತೊಂದು ಆತಂಕದ ಸಂಗತಿಯಾಗಿದೆ. ಭಾರತದಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳಲ್ಲಿ ಮೂರನೇ ಒಂದಂಶ (೩೩%) ಪ್ರಕರಣಗಳಲ್ಲಿ ಮಾತ್ರ ಅಪರಾಧಿಗೆ ಶಿಕ್ಷೆಯಾಗುತ್ತಿದೆ. ಇದು ಸಹ ಅತ್ಯಾಚಾರ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರಲು ಒಂದು ಕಾರಣವಾಗಿರ ಬಹುದು. ೧೯೭೧ ರಿಂದ ಈಚೆಗೆ ನಮ್ಮ ಭಾರತದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ೧೨೦೦% ಏರಿಕೆಯಾಗಿದೆಯಂತೆ. 

ಈ ಎಲ್ಲಾ ಅಂಕಿ-ಸಂಖ್ಯೆಗಳು ನಿಜಕ್ಕೂ ನಾಗರಿಕ ಸಮಾಜವೊಂದು ತಲೆತಗ್ಗಿಸ ಬೇಕಾದಂತಹ ಅಂಕಿ‌ಅಂಶಗಳೆಂದು ಹೇಳಿದರೆ ತಪ್ಪಾಗಲಾರದು. ನಾಗರಿಕನೆಂದು ಹಣೆಪಟ್ಟಿ ಅಂಟಿಸಿಕೊಂಡು ಭೂಮಂಡಲದ ದೊರೆಯೆಂದು ಹಮ್ಮಿನಿಂದ ಬದುಕುವ ಮನುಷ್ಯ ಮಹಿಳೆಯ ಮೇಲೆ ಎಸಗುವ ದೌರ್ಜನ್ಯ ಕ್ಷಮ್ಯವೆನ್ನಲಾಗದು. ಅತ್ಯಾಚಾರವಂತೂ ಅತ್ಯಂತ ನೀಚ ಕೃತ್ಯವಾಗಿದ್ದು ಇದನ್ನು ತಡೆಗಟ್ಟುವ ಅಂದೋಲನ ವಿಳಂಬವಿಲ್ಲದೇ ಆರಂಭವಾಗಬೇಕಾಗಿದೆ.

ಪ್ರಪ್ರಥಮವಾಗಿದೆ ೨೦೧೧ರ ಜನಗಣತಿಯಂತೆ ಭಾರತದಲ್ಲಿ ಸ್ತ್ರೀ ಮತ್ತು ಪುರುಷರ ನಡುವಿನ ಲಿಂಗಾನುಪಾತದಲ್ಲಿ ತುಂಬಾ ಅಂತರವಿದೆ. ಆರು ವರುಷದೊಳಗಿನ ಒಂದು ಸಾವಿರ ಗಂಡು ಮಕ್ಕಳಿಗೆ ಕೇವಲ ೯೪೦ ಹೆಣ್ಣು ಮಕ್ಕಳಿವೆ. ಆದ್ದರಿಂದ ಸರಕಾರ ಪ್ರಸವಪೂರ್ವ ಲಿಂಗಪತ್ತೆಯನ್ನು ನಿಷೇಧಿಸಿದೆ. ಇದನ್ನು ಪ್ರತಿಯೋರ್ವರು ಸ್ವ‌ಇಚ್ಛೆಯಿಂದ ಕಟ್ಟುನಿಟ್ಟಾಗಿ ಪಾಲಿಸ ಬೇಕು. ವೈದ್ಯರು ಅಥವಾ ವೈದ್ಯಕೀಯ ತಂತ್ರಜ್ಞರು ತಾವೇ ಒಂದು ಲಕ್ಷ್ಮಣ ರೇಖೆಯನ್ನು ಹಾಕಿಕೊಂಡು ಪ್ರಸವಪೂರ್ವದಲ್ಲಿ ಶಿಶುವಿನ ಲಿಂಗವನ್ನು ಅದರ ಪೋಷಕರಿಗೆ ತಿಳಿಸದಿರಲು ಪ್ರತಿಜ್ಞೆ ಕೈಗೊಳ್ಳಬೇಕು.

ಹೆಣ್ಣು ಶಿಶುಗಳ ಬೆಳವಣೆಯಲ್ಲಿ ಕೆಲ ಮಾತಪಿತೃಗಳು ಗಂಡು ಮಗುವಿಗೆ ನೀಡುವಷ್ಟು ಮಹತ್ವವನ್ನು ನೀಡುವುದಿಲ್ಲ. ಇದರಿಂದ ಬಹಪಾಲು ಹೆಣ್ಣು ಮಕ್ಕಳು ಕಿರಿಯ ವಯಸ್ಸಿನಲ್ಲಿಯೇ ಮರಣ ಹೊಂದುತ್ತವೆ. ಆದ್ದರಿಂದ ದೇಶದಲ್ಲಿರುವ ಪ್ರತಿಯೋರ್ವ ಅರ್ಹ ಯುವಜನತೆಯನ್ನೂ ಈ ಬಗ್ಗೆ ತರಬೇತಿಗೊಳಿಸಿ ಹೆಣ್ಣುಶಿಶುಗಳ ಮಹತ್ವವನ್ನು ಮನಗಾಣಿಸ ಬೇಕಾಗಿದೆ. 

ಭಾರತದಲ್ಲಿ ಜನಿಸುವ ಪ್ರತಿಯೊಂದು ಹೆಣ್ಣು ಮಗುವನ್ನು ಶಾಲೆಗೆ ಕಳುಹಿಸುವುದನ್ನು ಕಡ್ಡಾಯಗೊಳಿಸ ಬೇಕು. ಜಾತಿ, ಧರ್ಮ, ಆರ್ಥಿಕತೆಯನ್ನು ಪರಿಗಣಿಸದೇ ಅವಳಿಗೆ ಉಚಿತ ಶಿಕ್ಷಣ ದೊರಕುವಂತೆ ಸರಕಾರಗಳು ನೋಡಿಕೊಳ್ಳ ಬೇಕು. ಯಾವುದೇ ತಂದೆ-ತಾಯಂದಿರು ಹೆಣ್ಣು ಮಗುವನ್ನು ಶಾಲೆಗೆ ಕಳುಹಿಸದಿರುವುದು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಿ ಅದಕ್ಕೆ ಜೇಲಿಗೆ ಕಳುಹಿಸುವ ಕಠಿಣ ಶಿಕ್ಷೆಯನ್ನು ವಿಧಿಸಬೇಕು. ಹೆಣ್ಣು ಶಿಕ್ಷಿತಳಾದಾಗ ಯಾವುದೇ ವಿಧದ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ವಿರುದ್ಧ ಆಕೆ ಧ್ವನಿ ಎತ್ತಬಲ್ಲಳು. ಇದು ಆಕೆಯ ಹಕ್ಕಾಗಿದೆ. ಶಿಕ್ಷಣ ಆಕೆಗೆ ತನ್ನ ಹಕ್ಕನ್ನು ಚಲಾಯಿಸುವ ಧೈರ್ಯವನ್ನು ನೀಡುತ್ತದೆ. 

ಹೆಣ್ಣು ಮಕ್ಕಳಿಗೆ ಶಾಲೆಗಳಲ್ಲಿ ಅವರ ಶರೀರವನ್ನು ಸದೃಢಗೊಳಿಸಿಕೊಳ್ಳುವ ಕಲೆಯನ್ನು (ಯೋಗ, ಕರಾಠೆ, ಕ್ರೀಡೆ ಇತ್ಯಾದಿ) ಕಡ್ಡಾಯವಾಗಿ ಕಲಿಸಿಕೊಡಬೇಕು. ಧೈರ್ಯ, ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವಂತೆ ವ್ಯಕ್ತಿತ್ವ ವಿಕಸನಗೊಳಿಸ ಬೇಕು. 

ಅತ್ಯಾಚಾರದಂತಹ ಅಪರಾಧಗಳು ಘಟಿಸಿದಾಗ ಅವುಗಳ ತನಿಖೆಗೆ ಕಾಲಮಿತಿಯನ್ನು ನಿಗದಿಗೊಳಿಸ ಬೇಕು. ಗರಿಷ್ಟ ಎರಡು ತಿಂಗಳುಗಳೊಳಗೆ ಆರಕ್ಷರು ವಿಚಾರಣೆಯನ್ನು ಪೂರ್ತಿಗೊಳಿಸಿ ಆರು ತಿಂಗಳಿನಿಂದ ಒಂದು ವರ್ಷದೊಳಗೆ ನ್ಯಾಯಾಲಯಗಳು ತೀರ್ಪು ನೀಡುವಂತಾಗ ಬೇಕು. ಕಾಲಹರಣವಾಗದೇ ತ್ವರಿತವಾಗಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಿದರೆ ಇತರರಿಗೆ ಅದೊಂದು ಎಚ್ಚರಿಕೆಯ ಗಂಟೆಯಾಗಬಹುದು.

ಇನ್ನೊಂದೆಡೆ ಭಾರತವು ಕುಟುಂಬ ವ್ಯವಸ್ಥೆಯ ಶಿಥಿಲತೆಯೂ ಸಹ ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಹೆಚ್ಚಿಸಿವೆ ಎನ್ನುವ ವಾದವೂ ಇದೆ. ಭಾರತದಲ್ಲಿ ಜನಸಂಖ್ಯೆಯ ಹೆಚ್ಚಳದಿಂದ ಸರ್ವರಿಗೂ ಗೌರವಪೂರ್ವಕ ನೌಕರಿ ಸಿಗುವುದು ಸಾಧ್ಯವಿಲ್ಲ. ಈ ಮಧ್ಯೆ ಮದುವೆಗೆ ಅರ್ಹರಿರುವ ಯುವಜನರಲ್ಲಿ ಇನ್ನೂ ಶೇಕಡಾ ೫೪.೫ ರಷ್ಟು ಯುವಕರು ಹಾಗೂ ಶೇಕಡಾ ೪೪.೮ ರಷ್ಟು ಯುವತಿಯರು ಅವಿವಾಹಿತರಾಗಿದ್ದಾರಂತೆ. ಶಿಕ್ಷಣ, ಸರಕಾರಿ ಅಥವಾ ತನಗಿಂತ ಉತ್ತಮ ನೌಕರಿಯಲ್ಲಿರುವವರೇ ಸಂಗಾತಿಗಳಾಗಿ ಸಿಗಬೇಕೆಂದು ಯುವತಿಯರು ಕಾಯುವುದು ಇತ್ಯಾದಿ ಕಾರಣಗಳಿಂದ ಅವಿವಾಹಿತ ಯುವಜನರ ಸಂಖ್ಯೆ ಹೆಚ್ಚುತ್ತಿದೆಯಂತೆ. ಈ ಕುರಿತೂ ಸಹ ಗಂಭೀರವಾಗಿ ಚರ್ಚಿಸಿ ಉನ್ನತ ಶಿಕ್ಷಣದ ಸಂದರ್ಭದಲ್ಲಿ ಯುವಜನತೆಗೆ ತಿಳುವಳಿಕೆ ನೀಡುವ ಕಾರ್ಯ ಆರಂಭಿಸ ಬೇಕಾಗಿದೆ. 

ಒಟ್ಟಾರೆಯಾಗಿ ಹೆಣ್ಣು ಗಂಡಿನ ಅರ್ಧಾಂಗಿಯಷ್ಟೇ ಅಲ್ಲ ಈ ಪ್ರಕೃತಿಯಲ್ಲಿನ ಸರ್ವ ಜಡ, ಚೇತನಗಳ ಅರ್ಧ ಹಕ್ಕುದಾರಳು ಆಗಿದ್ದಾಳೆ. ತಾನು ಶಕ್ತಿವಂತ ಎನ್ನುವ ಕಾರಣದಿಂದ ಪುರುಷ ಜೀವಿ ಆಕೆಯ ಮೇಲೆ ಅತ್ಯಾಚಾರದಂತಹ ಹೇಯ ಕೃತ್ಯಕಿಳಿಯುವುದು ಎಂದೆಂದೂ ಕ್ಷಮಾರ್ಹವಲ್ಲ. ಅಬಾಲ ವೃದ್ಧರಾದಿಯಾಗಿ ಯಾರೇ ಇಂಥಹ ಹೀನ ಕೃತ್ಯ ಎಸಗಿದರೂ ಅವರು ಕಠಿಣ ಶಿಕ್ಷೆಯಿಂದ ಪಾರಾಗದಂತೆ ನೋಡುಕೊಳ್ಳುವುದು ಸಮಾಜದ ಕರ್ತವ್ಯವಾಗಿದೆ. 

1 likes

Published By

Argodu Suresh Shenoy

argodusureshshenoy

Comments

Appreciate the author by telling what you feel about the post 💓

Please Login or Create a free account to comment.